ಪೋಷಕರ ಕಣ್ತಪ್ಪಿಸಿ ನಡುರಾತ್ರಿ ಮಹೀಂದ್ರಾ ಎಕ್ಸ್‌ಯುವಿ 700ನಲ್ಲಿ ಜಾಲಿರೈಡ್‌ಗೆ ತೆರಳಿದ ಅಪ್ರಾಪ್ತರು- ಸರಣಿ ಅಪಘಾತಕ್ಕೆ 7ಮಂದಿ ಸಾವು



ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ ಸತ್ಯವಾರ ಗ್ರಾಮದ ಸಮೀಪ ಶುಕ್ರವಾರ ನಸುಕಿನ ಜಾವ ಭೀಕರ ಸರಣಿ ರಸ್ತೆ ಅಪಘಾತವು ಸಂಭವಿಸಿ ಆರು ಮಂದಿ ಅಪ್ರಾಪ್ತರು ಸೇರಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ‌.

ಮಹೀಂದ್ರಾ ಎಕ್ಸ್‌ಯುವಿ 700 ಕಾರು ಮುಂದಿನಿಂದ ಸಂಚರಿಸುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿ ಬಳಿಕ ಡಿವೈಡರ್‌ಗೆ ಅಪ್ಪಳಿಸಿ ಪಲ್ಟಿಯಾಗಿ ಮುಂಭಾಗದಲ್ಲಿ ಬರುತ್ತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಸರಣಿ ಡಿಕ್ಕಿ ಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ವಿದ್ಯಾರ್ಥಿಗಳು ಹಾಗೂ ಬೈಕ್‌ ಸವಾರ ಗಗನ್ (26) ಸೇರಿ ಒಟ್ಟು 7 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಗನ್ ಬೈಕ್ ಮೇಲಿಂದ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಬೈಕ್ ಸವಾರ ಗಗನ್ ದೇವನಾಯಕನಹಳ್ಳಿ ನಿವಾಸಿ. ಸಫಲ್ ಮಾರುಕಟ್ಟೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದ್ದು ಇದ್ದ ಓರ್ವ ಪುತ್ರನನ್ನು ಕಳೆದುಕೊಂಡು ಆತನ ಅಂಧ ತಾಯಿ ಕಂಗಾಲಾಗಿದ್ದಾರೆ. ಆರು ಮಂದಿ ವಿದ್ಯಾರ್ಥಿಗಳ ಮೋಜು ಮಸ್ತಿಗೆ ಬೈಕ್ ಸವಾರ ಗಗನ್ ಬಲಿಯಾಗಿದ್ದಾನೆ. ಗಗನ್ ತಾಯಿಗೆ ಕಣ್ಣು ಕಾಣಿಸುವುದಿಲ್ಲ. ಇಡೀ ಮನೆಯ ಜವಾಬ್ದಾರಿ ಗಗನ್ ಮೇಲಿತ್ತು. ಆದರೆ ಇದೀಗ ಮಗನನ್ನು ಕಳೆದುಕೊಂಡು ಗಗನ್ ಪೋಷಕರು ಕಣ್ಣೀರು ಹಾಕ್ತಿದ್ದಾರೆ.

ಮೃತ ವಿದ್ಯಾರ್ಥಿಗಳಲ್ಲಿ 17 ವರ್ಷದ ಅಶ್ವಿನ್ ನಾಯರ್ ಆರ್‌ವಿ ಪಿಯು ಕಾಲೇಜಿನ 1ನೇ ಪಿಯುಸಿ ವಿದ್ಯಾರ್ಥಿ. ಪರೀಕ್ಷೆ ಮುಗಿದ ಹಿನ್ನೆಲೆ ಸ್ನೇಹಿತರೊಂದಿಗೆ ನೈಟ್ ಔಟ್‌ಗೆ ತೆರಳಿದ್ದಾನೆ. ಅಮ್ಮನಿಗೆ ತಿಳಿಸದೇ ಮನೆಯಿಂದ ಹೊರಟಿದ್ದಾನೆ. ಮಗ ಮನೆಯಲ್ಲಿ ಮಲಗಿದ್ದಾನೆ ಎಂದುಕೊಂಡಿದ್ದ ತಾಯಿಗೆ, ಬೆಳಗ್ಗೆ ಸೆಕ್ಯೂರಿಟಿ ಗಾರ್ಡ್ ಬಂದು “ನಿಮ್ಮ ಮಗ ಕಾರಿನಲ್ಲಿ ಸ್ನೇಹಿತರ ಜೊತೆಗೆ ಹೋಗಿದ್ದಾನೆ" ಎಂದು ಹೇಳಿದಾಗ ಆತಂಕ ಉಂಟಾಗಿದೆ. ತಾಯಿ ಮಗನಿಗೆ ಕರೆ ಮಾಡಿದಾಗ, ಪೊಲೀಸರು ಫೋನ್ ಎತ್ತಿದ್ದು ಅಪಘಾತದಲ್ಲಿ ನಿಮ್ಮ ಮಗ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಮಗನ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ಬಂದಿದ್ದ ಅಶ್ವಿನ್ ಕುಟುಂಬ ಮಗನನ್ನು ಕಳೆದುಕೊಂಡು ಕಂಗಲಾಗಿದ್ದಾರೆ. ಮಗ ಇನ್ನಿಲ್ಲ ಎಂದು ತಿಳಿದ ತಾಯಿ ದುಃಖ ಹೇಳತೀರದಾಗಿದೆ.

ಅಪಘಾತದಲ್ಲಿ ಮೃತಪಟ್ಟ ಮತ್ತೊಬ್ಬ ವಿದ್ಯಾರ್ಥಿ ಅರ್ಹಾನ್ ಶರೀಫ್ ಅವರ ಮನೆ ಇರುವ ಪ್ರೇಜರ್ ಟೌನ್ನಲ್ಲಿ ಶೋಕ ಮಡುಗಟ್ಟಿದೆ. 10ನೇ ತರಗತಿಯಲ್ಲಿ ಓದುತ್ತಿದ್ದ ಅರ್ಹಾನ್, ಸೋಮವಾರ ಕುಟುಂಬದೊಂದಿಗೆ ದುಬೈ ಮೂಲಕ ಮೆಕ್ಕಾಗೆ ಉಮ್ರಾ ಯಾತ್ರೆಗೆ ತೆರಳಬೇಕಿತ್ತು. ಇದಕ್ಕಾಗಿ ಟಿಕೆಟ್ ಕೂಡ ಬುಕ್ ಆಗಿತ್ತು. ಊಟವಾದ ಬಳಿಕ ಅರ್ಹಾನ್ ರಾತ್ರಿ ಯಾರಿಗೂ ಹೇಳದೇ ಸ್ನೇಹಿತರ ಜೊತೆಗೆ ಹೋಗಿದ್ದ. ಬೆಳಗ್ಗೆ ಪೊಲೀಸರ ಕರೆ ಬಂದಾಗಲೇ ವಿಷಯ ಗೊತ್ತಾಯಿತು. ಮಗನ ಕನಸುಗಳೆಲ್ಲ ಮಣ್ಣಾಗಿ ಹೋದವು" ಎಂದು ಕುಟುಂಬಸ್ಥರು ಕಣ್ಣೀರು ಹಾಕ್ತಿದ್ದಾರೆ.

ಮತ್ತೊಬ್ಬ ಯುವಕ ಈತನ್ ಜಾರ್ಜ್ ರಾತ್ರಿ 'ರೂಮ್‌ನಲ್ಲಿ ಮಲಗೇನೆ' ಎಂದು ಹೇಳಿ ಹೊರಟಿದ್ದ. ಬೆಳಗ್ಗೆ ಪೊಲೀಸರಿಂದ ಕರೆ ಮಾಡಿ ವಿಷಯ ತಿಳಿಸಿದಾಗ ಜಾರ್ಜ್ ತಂದೆ "ನಮ್ಮ ಮಗ ಮನೆಯಲ್ಲೇ ಇದ್ದಾನೆ" ಎಂದು ಹೇಳಿದರು. ನಂತರ ರೂಮ್‌ಗೆ ಹೋಗಿ ಬಾಗಿಲು ತಟ್ಟಿದರೂ ತೆಗೆಯದ ಕಾರಣ, ಆತಂಕಗೊಂಡು ಆಸ್ಪತ್ರೆಗೆ ಧಾವಿಸಿದಾಗಲೇ ಮಗ ಸಾವನ್ನಪ್ಪಿರುವ ಸುದ್ದಿ ತಿಳಿದಿದೆ. ಘಟನೆಯಲ್ಲಿ 18 ವರ್ಷದ ಫರ್ಹಾನ್ ಕೂಡ ಕೊನೆಯುಸಿರೆಳೆದಿದ್ದಾನೆ.

ಘಟನೆಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಏರ್‌ಬ್ಯಾಗ್‌ಗಳು ಸಂಪೂರ್ಣ ಓಪನ್ ಆಗಿ ಬ್ಲಾಸ್ಟ್ ಆಗಿರುವುದು ಕಂಡುಬಂದಿದೆ. ಕಾರಿನಲ್ಲಿದ್ದ ಎಲ್ಲ ಆರು ಮಂದಿ ಹುಡುಗರ ತಲೆಗಳೂ ಜಜ್ಜಿ ಹೋಗಿದ್ದು ಗುರುತು ಸಿಗದಂತಾಗಿತ್ತು. ಘಟನೆ ಕುರಿತು ಬೆಂಗಳೂರು ಗ್ರಾಮಾಂತರ ಎಸ್‌ಪಿ ಚಂದ್ರಕಾಂತ್ ಮಾತನಾಡಿ, "ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಯಾರ ಗುರುತೂ ಸಿಗದಷ್ಟು ಅಪಘಾತದ ತೀವ್ರತೆ ಇತ್ತು. ಮೃತರೆಲ್ಲ 16 ರಿಂದ 20 ವರ್ಷದ ಯುವಕರು. ಎಕ್ಸ್‌ಯುವಿ ಕಾರು ಮೊದಲು ಬೈಕ್‌ಗೆ, ನಂತರ ಕ್ಯಾಂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪ್ರಕರಣದ ತನಿಖೆಯನ್ನು ಹೊಸಕೋಟೆ ಡಿವೈಎಸ್ಪಿ ನೇತೃತ್ವದಲ್ಲಿ ನಡೆಸಲು ಆದೇಶಿಸಲಾಗಿದೆ. ಕಾರು ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu