ಆಳ್ವಾಸ್: ರಾಜ್ಯಮಟ್ಟದ ಅಂತರ್‌ಕಾಲೇಜು ಫೆಸ್ಟ್ ‘ಎಂಥುಸಿಯಾ’ _ಬಯಲು ಶಾಲೆಯ ಶಿಕ್ಷಣ ಬದುಕಿನ ನಿಜವಾದ ಕಲಿಕೆ: ಕೋಟ್ಯಾನ್




ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ಮ್ಯಾನಜ್ಮೇಂಟ್ ವಿಭಾಗದ ವತಿಯಿಂದ ರಾಜ್ಯಮಟ್ಟದ ಅಂತರ್‌ಕಾಲೇಜು ಫೆಸ್ಟ್ ‘ಎಂಥುಸಿಯಾ’ ಗುರುವಾರ ಸಂಸ್ಥೆಯ ಕೃಷಿಸಿರಿ ಆವರಣದ ಮೋಹಿನಿ ಅಪ್ಪಾಜಿ ನಾಯಕ್ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಲ್ಕಿ–ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಜೀವನದಲ್ಲಿ ವ್ಯಕ್ತಿಯೊಬ್ಬನು ಯಾವ ಎತ್ತರವನ್ನು ತಲುಪಬೇಕು ಎಂಬುದರ ಬಗ್ಗೆ ಸ್ಪಷ್ಟ ಗುರಿ ಹೊಂದಿರುವುದು ಅತ್ಯಂತ ಮುಖ್ಯ. ಗುರಿಯನ್ನು ಸಾಧಿಸುವ ಮಾರ್ಗದಲ್ಲಿ ಸ್ಪರ್ಧೆಗಳು ಪ್ರಮುಖ ಹಂತಗಳಾಗಿ ಕಾರ್ಯನಿರ್ವಹಿಸುತ್ತವೆ. ವಿದ್ಯಾರ್ಥಿಗಳು ಕೇವಲ ಪುಸ್ತಕದ ಒಳಗಿನ ಜ್ಞಾನಕ್ಕೆ ಸೀಮಿತರಾಗದೆ ಬದುಕಿನ ಅನುಭವಗಳ ಮೂಲಕವೂ ಕಲಿಯಬೇಕು. ಪುಸ್ತಕಗಳಲ್ಲಿ ದೊರೆಯುವ ಜ್ಞಾನ ಸೀಮಿತವಾಗಿದ್ದು, ಅದರಾಚೆಯೂ ಬದುಕಿನ ಅನೇಕ ಪಾಠಗಳು ಅಡಗಿವೆ. ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಮಾತ್ರವೇ ಜೀವನದ ಸಾಧನೆ ಅಲ್ಲ, ಬಯಲು ಶಾಲೆಯ ಶಿಕ್ಷಣ ಬದುಕಿನ ನಿಜವಾದ ಕಲಿಕೆ ಎಂದರು.
ನೂರಕ್ಕೆ ನೂರು ಅಂಕ ಜೀವನ ಪಾಠ ಕಲಿಸದು
ಹಲವು ಬಾರಿ ನೂರಕ್ಕೆ ನೂರು ಅಂಕ ಪಡೆದ ಮಕ್ಕಳ ಪೋಷಕರೇ ವೃದ್ಧಾಶ್ರಮದಲ್ಲಿ ಜೀವನ ಸಾಗಿಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಆದ್ದರಿಂದ ಬದುಕಿನ ವಿದ್ಯೆ ಪುಸ್ತಕಗಳಾಚೆಯೂ ಇದೆ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದು ತಿಳಿಸಿದರು.

ಸ್ಥಳೀಯ ಪ್ರತಿಭೆಗಳಿಂದ ಸಾಧನೆ ಮೆರೆದಿದೆ
ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ರೋನಾಲ್ಡ್ ಸಿಲ್ವಾ ಡಿಸೋಜಾ ಮಾತನಾಡಿ, ಲೆಕ್ಸಾ ಸಂಸ್ಥೆ ಲೈಟಿಂಗ್ ಕ್ಷೇತ್ರದಲ್ಲಿ ಇಂದು ದೇಶದಲ್ಲೇ ಮುಂಚೂಣಿಯ ಸ್ಥಾನವನ್ನು ಗಳಿಸಿದೆ. ಬಹುರಾಷ್ಟ್ರೀಯ ಕಂಪನಿಗಳು ಈ ಕ್ಷೇತ್ರದಲ್ಲಿ ಅನೇಕ ಉತ್ಪನ್ನಗಳನ್ನು ತಯಾರಿಸುತ್ತಿದ್ದರೂ ಕೂಡ ಗುಣಮಟ್ಟದ ದೃಷ್ಟಿಯಿಂದ ನಮ್ಮ ಮಟ್ಟಕ್ಕೆ ತಲುಪಲು ಸಾಧ್ಯವಾಗಿಲ್ಲ  ಈ ಸಾಧನೆ ಸಾಧ್ಯವಾಗಲು ಮೂಡಬಿದಿರೆ ಪ್ರದೇಶದ ಸ್ಥಳೀಯ ಪ್ರತಿಭೆಗಳ ಸಹಕಾರವೇ ಪ್ರಮುಖ ಕಾರಣವಾಗಿದೆ. ಸ್ಥಳೀಯ ಯುವಕರ ಸಾಮರ್ಥ್ಯ, ಪರಿಶ್ರಮ ಮತ್ತು ನಿಷ್ಠೆಯೇ ಸಂಸ್ಥೆಯನ್ನು ಈ ಮಟ್ಟದ ಯಶಸ್ಸಿನತ್ತ ಕೊಂಡೊಯ್ದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ರೂ 257 ರಿಂದ 100 ಕೋಟಿಯ ವ್ಯವಹಾರ
ತನ್ನ ಜೀವನದ ವೃತ್ತಾಂತವನ್ನು ಹಂಚಿಕೊAಡ ಅವರು, ಸಂಸ್ಥೆಯನ್ನು ಆರಂಭಿಸಿದಾಗ ತನ್ನ ಬಳಿ ಕೇವಲ 257 ರೂಪಾಯಿ ಮಾತ್ರ ಇದ್ದವು. ಆದರೆ ದೃಢ ಸಂಕಲ್ಪ, ಶ್ರಮ ಹಾಗೂ ಹೋರಾಟದಿಂದ ಇಂದು ಸಂಸ್ಥೆ ಎಂಟು ವರ್ಷಗಳನ್ನು ಪೂರೈಸಿ ಸುಮಾರು ನೂರು ಕೋಟಿ ರೂಪಾಯಿ ವ್ಯವಹಾರ ಮಾಡುವ ಮಟ್ಟಕ್ಕೆ ಬೆಳೆದಿದೆ. ಯಶಸ್ಸು ಸಾಧಿಸಲು ನಾವು ಯಾವಾಗಲೂ ಇತರರನ್ನು ಉದಾಹರಣೆಯಾಗಿ ನೋಡಬಾರದು, ನಾವು ನಮ್ಮದೇ ಸಾಧನೆಯ ಮೂಲಕ ಇತರರಿಗೆ ಉದಾಹರಣೆಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳು ಹೆಚ್ಚು ಅವಕಾಶಗಳನ್ನು ಬಳಸಿಕೊಂಡು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಂಡು ಸಮಾಜಕ್ಕೆ ಮತ್ತು ದೇಶಕ್ಕೆ ಕೊಡುಗೆ ನೀಡುವ ದಿಕ್ಕಿನಲ್ಲಿ ಮುಂದುವರಿಯಬೇಕು ಎಂದರು.
ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಅವಿನಾಶ್ ಸುವರ್ಣ ಮಾತನಾಡಿ, ಹಲವು ದೇಶಗಳಲ್ಲಿ ಜೆನ್ ಝಿ ಪೀಳಿಗೆಯವರು ದೇಶದ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದಂಗೆಯಲ್ಲಿ ತೊಡಗಿದ್ದರೆ,  ನಮ್ಮ ದೇಶದಲ್ಲಿ ಜೆನ್ ಝಿ ಯುವಕರು ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ನವೀನ ಆಲೋಚನೆಗಳ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಾ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ ಎಂದರು.
ಕರ‍್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್,  ಕರ‍್ಯಕ್ರಮ ಸಂಯೋಜಕರಾದ ಪ್ರವೀಣ್ ಕುಮಾರ್ ಬಿಜೆ, ಪ್ರಜ್ನಾ ಎಸ್‌ಬಿ, ನಮಿತಾ, ವಿದ್ಯಾರ್ಥಿ ಸಂಯೋಜಕರಾದ  ಜಾಹ್ನವಿ ಶೆಟ್ಟಿ, ಆಶೀಶ್ ಪೂಜಾರಿ, ಖುಷಿ ಇದ್ದರು.
ಸಪ್ತಶ್ರೀ ನಿರೂಪಿಸಿ, ಶ್ರೀಶ್ ಸ್ವಾಗತಿಸಿ, ಭೂಮಿಕ ವಂದಿಸಿದರು.