ಮಂಗಳೂರು: ವಿವಾಹಿತನಾಗಿದ್ದರೂ ಮ್ಯಾಟ್ರಿಮೊನಿಯಲ್ಲಿ ಬೇರೆ ಯುವತಿಯರಿಗೆ ಗಾಳ ಹಾಕಿ ಹಣ ವಂಚಿಸುತ್ತಿದ್ದ ಆರೋಪಿಯೋರ್ವನು ಪೊಲೀಸ್ ಬಲೆಗೆ ಬಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೋರ್ವ ವಿವಾಹಿತನ ವಂಚನೆ ಬಯಲಾಗಿದೆ.
ಬಜ್ಪೆ ನಿವಾಸಿ ಮನೀಶ್ ಎಂಬಾತ ವಿದೇಶದಲ್ಲಿ ಕುಳಿತು ಕರಾವಳಿ ಮತ್ತು ಮಂಗಳೂರು ಯುವತಿಯರನ್ನೇ ಟಾರ್ಗೆಟ್ ಮಾಡಿ ಪ್ರೀತಿ, ಪ್ರೇಮ, ಪ್ರಣಯದ ಬಲೆಗೆ ಕೆಡವಿ ಹಾಕುತ್ತಿದ್ದ. ಪತಿಯ ಪ್ರೇಮ, ಪ್ರೀತಿ, ಪ್ರಣಯದಾಟಕ್ಕೆ ಬೇಸತ್ತ ಪತ್ನಿ ಮನೀಶ್ ವಿರುದ್ಧ ಪತ್ನಿ ಪ್ರೀತಿ ಎಂಬಾಕೆ ಮಹಿಳಾ ಠಾಣೆಯ ಮೆಟ್ಟಿಲೇರಿದ್ದ. ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆರೋಪಿ ಮನೀಶ್ ಫೇಸ್ ಬುಕ್‌ನಲ್ಲಿ ಪ್ರೀತಿಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಬ್ಲ್ಯಾಕ್ ಮೇಲ್ ಮಾಡಿ ಮದುವೆಯಾಗಿದ್ದಾನೆ ಎನ್ನಲಾಗಿದೆ. ಮದುವೆಗೆ ಮೂರು ದಿನ ಇರುವಾಗ ಮದುವೆಗೆ ಹಣವಿಲ್ಲವೆಂದು ನಾಟಕವಾಡಿದ್ದ. ಬಳಿಕ ಮದುವೆಯ ಎಲ್ಲಾ ಖರ್ಚು ಭರಿಸಿ ಪೋಷಕರು ಪ್ರೀತಿಯನ್ನು ಮನೀಶ್‌ನೊಂದಿಗೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆಯಾದ ಬಳಿಕ 2ಲಕ್ಷ ನೀಡಿ ವಿದೇಶದಲ್ಲಿ ಪತಿಗೆ ಕೆಲಸ ಕೊಡಿಸಲು ಪ್ರೀತಿ ಸಹಕರಿಸಿದ್ದರು.
ದುಬೈಗೆ ಹೋಗಿ ಕೆಲಸ ಮಾಡುತ್ತಿದ್ದ ಮನೀಶ್ ಬಹರೇನ್‌ನಲ್ಲಿರುವ ಮಹಿಳೆಯನ್ನು ಪ್ರೇಮದ ಬಲೆಗೆ ಕೆಡವಿದ್ದ. ಈ. ವಿಚಾರ ತಿಳಿದು ಈತನ ಇತಿಹಾಸ ಕೆದಕಿದ ಪತ್ನಿ ಪ್ರೀತಿಗೆ ಶಾಕ್ ಆಗಿದೆ. ಈತ ಮದುವೆಗೂ ಮುನ್ನ ಹಲವಾರು ಯುವತಿಯರೊಂದಿಗೆ ಲವ್ ಆಫೇರ್ ಇಟ್ಟುಕೊಂಡಿದ್ದ. ಟಿಕ್ ಟಾಕ್ ಮಾಡಿ ಮನೀಶ್ ಯುವತಿಯರಿಗೆ ಗಾಳ ಹಾಕುತ್ತಿದ್ದ. ಬಲೆಗೆ ಬೀಳುತ್ತಿದ್ದ ಯುವತಿಯರ ಬಳಿ ಹಣ ಪಡೆದು ಮೋಸ ಮಾಡಿದ್ದಾಗಿ ಆ ಯುವತಿಯರಿಂದಲೇ ಪ್ರೀತಿಗೆ ಮಾಹಿತಿ ತಿಳಿದು ಬಂದಿದೆ.
ಹವರು ಹಣ ವಾಪಾಸ್ ಕೇಳಿದ್ರೆ ಎಲ್ಲಾ ಯುವತಿಯರಿಗೂ 'ತನಗೆ ಬ್ರೈನ್ ಟ್ಯೂಮರ್ ಇದೆ ಎಂದು ಹಣ ಕೊಡದೇ ಲವ್ ಬ್ರೇಕ್ ಅಪ್ ಮಾಡಿಕೊಳ್ಳುತ್ತಿದ್ದನಂತೆ. ಮನೀಶ್‌ನ ಈ ವಂಚನೆಯಿಂದ ಬೇಸತ್ತ ಪತ್ನಿ ಇಂತಹ ಪತಿ ಬೇಡ. ಮತ್ತೆ ಯಾವ ಯುವತಿಯರೂ ಮೋಸ ಹೋಗಬಾರದೆಂದು ವಿಚಾರ ಬಹಿರಂಗ ಮಾಡಿರುವ ಪ್ರೀತಿ ಇದೀಗ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.