ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಸವಾರ ಸ್ಥಳದಲ್ಲಿಯೇ ಪ್ರಾಣಬಿಟ್ಟ - ಇನ್ನಿಬ್ಬರಿಗೆ ಗಂಭೀರ ಗಾಯ


ಬೆಂಗಳೂರು: ರಸ್ತೆಯ ತಿರುವಿನಲ್ಲಿ ಬೈಕ್​ ಸ್ಕಿಡ್​ ಆಗಿರುವ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ ತಾಲ್ಲೂಕಿನ ಜಿಗಣಿ-ಹಾರೋಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾತನೂರು ನಿವಾಸಿ ಶಿವ(24) ಮೃತಪಟ್ಟ ದುರ್ದೈವಿ. ಹಿಂಬದಿ ಸವಾರರಾದ ಈರಪ್ಪ ಹಾಗೂ ಆಂಧ್ರಪ್ರದೇಶ ಮೂಲದ ಟಪ್ಪಗಾರಿ ಮಚ್ಚೇಂದ್ರ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವ, ಈರಪ್ಪ ಹಾಗೂ ಟಪ್ಪಗಾರಿ ಮಚ್ಚೇಂದ್ರ ರಾಯಲ್​ ಎನ್‌ ಫೀಲ್ಡ್ ಬೈಕಿನಲ್ಲಿ ಮರಸೂರು ಗೇಟ್​ನಿಂದ ಸಾತನೂರಿನತ್ತ ತೆರಳುತ್ತಿದ್ದರು. ಜಿಗಣಿ-ಹಾರೋಹಳ್ಳಿ ಮುಖ್ಯರಸ್ತೆಯ ತಿರುವಿನಲ್ಲಿ ಸವಾರನ ನಿಯಂತ್ರಣ ತಪ್ಪಿ ಬೈಕ್​ ಸ್ಕಿಡ್​ ಆಗಿದೆ. ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ತೀವ್ರ ಶಿವ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಈರಪ್ಪ ಹಾಗೂ ಟಪ್ಪಗಾರಿ ಮಚ್ಚೇಂದ್ರನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.