ಒಡಿಶಾ: ಒಂಬತ್ತು ವರ್ಷಗಳ ಹಿಂದೆ ದೇವಾಲಯದಿಂದ 4 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕದ್ದಿದ್ದ ಕಳ್ಳನೋರ್ವನು ಇದೀಗ ಪಶ್ಚಾತ್ತಾಪಪಟ್ಟು ಅವುಗಳನ್ನು ಹಿಂದಿರುಗಿಸಿ ಕ್ಷಮೆಯಾಚಿಸಿದ್ದಾನೆ. ವಿಶೇಷವೆಂದರೆ ಅವನು ಇತ್ತೀಚೆಗೆ ಭಗವದ್ಗೀತೆಯನ್ನು ಓದಿದ್ದನಂತೆ. ಆ ಬಳಿಕ ತನ್ನ ತಪ್ಪಿನ ಬಗ್ಗೆ ಪಶ್ಚಾತ್ತಾಪಗೊಂಡು ಈ ಆಭರಣಗಳನ್ನು ಹಿಂದಿರುಗಿಸಿದ್ದಾಗಿ ಕಳ್ಳ ಹೇಳಿಕೊಂಡಿದ್ದಾನೆ.
ಒಡಿಶಾದ ಗೋಪಿನಾಥಪುರದ ಗೋಪಿನಾಥ ದೇಗುಲದಲ್ಲಿ ಒಂಬತ್ತು ವರ್ಷಗಳ ಹಿಂದೆ ಶ್ರೀಕೃಷ್ಣನ ಆಭರಣಗಳು ಕಳ್ಳತನವಾಗಿತ್ತು. ಆ ಬಳಿಕ ಕಳ್ಳ ತನ್ನ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾನಂತೆ. ಅಲ್ಲದೆ ಇತ್ತೀಚೆಗೆ ಭಗವದ್ಗೀತೆ ಓದಿ ಮನ ಪರಿವರ್ತನೆಗೊಂಡು ರಾಧಾ-ಕೃಷ್ಣರ ಆಭರಣಗಳನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಪತ್ರದಲ್ಲಿ ಕಳ್ಳ ತನ್ನ ಹೆಸರು ಉಲ್ಲೇಖಿಸದೆ ಹೇಳಿಕೊಂಡಿದ್ದಾನೆ.
ರಾಧಾ-ಕೃಷ್ಣ ವಿಗ್ರಹದ ಕಿರೀಟ, ಕಿವಯೋಲೆ, ಬಳೆ, ಕೊಳಲು ಇದ್ದ ಬ್ಯಾಗ್ ದೇವಸ್ಥಾನದ ಮುಂಬಾಗಿಲ ಬಳಿ ದೊರಕಿದೆ. ತನಗಾದ ಪಶ್ಚಾತ್ತಾಪದ ಬಗ್ಗೆ ಕ್ಷಮಾಪಣೆ ಬರೆದ ಪತ್ರ ಹಾಗೂ ಪ್ರಾಯಶ್ಚಿತ್ತವಾಗಿ ನೀಡಿದ್ದ 300 ರೂ. ಬ್ಯಾಗ್ ನಲ್ಲಿ ಇತ್ತು ಎಂದು ದೇವಸ್ಥಾನದ ಅರ್ಚಕ ದೇಬೇಶ್ ಚಂದ್ರ ಮೊಹಂತಿ ಅವರು ಹೇಳಿಕೊಂಡಿದ್ದಾರೆ.
ಒಂಭತ್ತು ವರ್ಷಗಳ ಹಿಂದೆ ಕಳ್ಳತನವಾಗಿದ್ದ ದೇವರ ಆಭರಣಗಳು ಮರಳಿ ಪತ್ತೆಯಾಗಿರುವುದರಿಂದ ದೇವಾಲಯ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತರು ಸಂತಸ ಪಟ್ಟಿದ್ದಾರೆ. ಪಶ್ಚಾತ್ತಾಪ ಪಟ್ಟಿರುವ ಕಳ್ಳ ಶ್ರೀಕೃಷ್ಣನ ಬೋಧನೆಗಳ ಮಹತ್ವವನ್ನು ಅವನು ಅರಿತುಕೊಂಡಿರುವುದು ಭಗವದ್ಗೀತೆಯ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.