ನಟ ಸೋನು ಸೂದ್ ನೆರವಿನಿಂದ ಪುಟ್ಟ ಬಾಲೆಯ ಸಂಕಷ್ಟ ಮಾಯ: ಇನ್ನು ಮುಂದೆ ಬಿಹಾರದ ಚೌಮುಖಿಯ ಜೀವನ ಎಲ್ಲರಂತೆ

ನವಾಡ (ಬಿಹಾರ): ಸಿನಿಮಾದಲ್ಲಿ ಸದಾ ಖಳನಾಯಕ ಪಾತ್ರದಲ್ಲಿ ಮಿಂಚುವ ನಟ ಸೋನ್ ಸೂದ್ ರಿಯಲ್ ಲೈಫ್ ನಲ್ಲಿ ಬಡವರ ಪಾಲಿಗೆ ಸದಾ ನಾಯಕರಾಗಿದ್ದಾರೆ‌. ಇದೀಗ ಪುಟ್ಟ ಬಾಲೆಯೋರ್ವಳ ಸಂಕಷ್ಟಕ್ಕೆ ಮರುಗಿದ ನಟ ಸೋನು ಸೋದ್  ಆಕೆಯ ಬಾಳಿಗೆ ಬೆಳಕಾಗಿದ್ದಾರೆ‌.

ಹೌದು ಬಿಹಾರ ರಾಜ್ಯದ ನವಾಡ ಜಿಲ್ಲೆಯಲ್ಲಿ ನಾಲ್ಕು ಕೈಗಳು ಹಾಗೂ ನಾಲ್ಕು ಕಾಲುಗಳೊಂದಿಗೆ ಜನಿಸಿ, ನರಕಯಾತನೆ ಅನುಭವಿಸುತ್ತಿದ್ದ ಚೌಮುಖಿ ಕುಮಾರಿಗೆ ಸಹಾಯಹಸ್ತ ಚಾಚಿರುವ ಸೋನುಸೂದ್ ಆಕೆಯ ಪಾಲಿಗೆ ನಿಜವಾದ ನಾಯಕನಾಗಿದ್ದಾರೆ‌. ಚೌಮುಖಿ ಕುಮಾರಿಯ ಆಪರೇಷನ್​ ಮಾಡಿಸಿದ್ದಕ್ಕಾಗಿ ಆಕೆಯ ಪೋಷಕರು ಸೋನು ಸೂದ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ.


ಬಾಲಕಿ ಚೌಮುಖಿಯು ಸಂಕಷ್ಟ ಅನುಭವಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಚಾರ ಬಾಲಿವುಡ್ ನಟ ಸೋನು ಸೂದ್ ತಲುಪಿತ್ತು. ಬಳಿಕ ಅವರು ಆಕೆಯನ್ನು ಮುಂಬೈಗೆ ಕರೆತರುವಂತೆ ಪೋಷಕರನ್ನು ಕೇಳಿಕೊಂಡಿದ್ದರು. ಬಾಲಕಿಯನ್ನು ಮುಂಬೈನಲ್ಲಿ ವೈದ್ಯರು ಪರೀಕ್ಷಿಸಿದರು. ಬಳಿಕ ಸೂರತ್‌ನಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರು. ಇನ್ನು ಮುಂದೆ ಈ ಬಾಲಕಿ ಸಾಮಾನ್ಯ ಜೀವನವನ್ನು ನಡೆಸಬಹುದಾಗಿದೆ ವೈದ್ಯರು ಹೇಳಿದ್ದಾರೆ. 

ಈ ಬಗ್ಗೆ ಪತ್ರಕರ್ತರೊಬ್ಬರು ಟ್ವೀಟ್​ ಮಾಡಿದ್ದನ್ನು ರೀ ಟ್ವೀಟ್​ ಮಾಡಿರುವ ಸೋನು ಸೂದ್​, ಬಾಲಕಿಯನ್ನು ಹರಸಿದ್ದಾರೆ. ಅಲ್ಲದೆ ಚೌಮುಖಿಯ ಹಿರಿಯ ಸಹೋದರ ಹಾಗೂ ಸಹೋದರಿಯ ಶಿಕ್ಷಣದ ವೆಚ್ಚವನ್ನು ಸೋನು ಸೂದ್ ಭರಿಸುವುದಾಗಿಯೂ ಭರವಸೆ ನೀಡಿದ್ದಾರೆ.