ಯುವವೈದ್ಯೆಯನ್ನು ಮದುವೆಯಾದ ಪಂಜಾಬ್ ಸಿಎಂ ಭಗವಂತ್ ಮಾನ್ !
Thursday, July 7, 2022
ಚಂಡೀಗಢ: ಪಂಜಾಬ್ ಸಿಎಂ ಭಗವಂತ್ ಮಾನ್ ಇಂದು ಯುವವೈದ್ಯೆ ಡಾ.ಗುರುಪ್ರೀತ್ ಕೌರ್ ರನ್ನು ಇಂದು ಸರಳ ರೀತಿಯಲ್ಲಿ ವಿವಾಹವಾದರು. ಚಂಡೀಗಢ್ನ ಭಗವಂತ್ ಮಾನ್ ಅವರ ಮನೆಯಲ್ಲಿಯೇ ವಿವಾಹ ಸಮಾರಂಭ ಸರಳವಾಗಿ ನೆರವೇರಿತು.
ಆಪ್ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ಪ್ರಮುಖರು ಈ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ವಿವಾಹ ಕಾರ್ಯಕ್ರಮದಲ್ಲಿ ಕೆಲವೇ ಗಣ್ಯರು ಹಾಗೂ ಎರಡು ಕುಟುಂಬಗಳ ಆಪ್ತರು ಭಾಗವಹಿಸಿದ್ದಾರೆ.
ವಧು ಡಾ.ಗುರುಪ್ರೀತ್ ಕೌರ್ ಕಡುಗೆಂಪು ಬಣ್ಣದ ಲೆಹೆಂಗಾ ಧರಿಸಿದ್ದರೆ, ಪಂಜಾಬ್ ಸಿಎಂ ಭಗವಂತ್ ಮಾನ್ ಹೊಂಬಣ್ಣದ ಶೆರ್ವಾನಿಯಲ್ಲಿ ಮಿಂಚಿದರು. ಭಗವಂತ ಮಾನ್ ಅವರು ಖಡ್ಗ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 48 ವರ್ಷದ ಭಗವಂತ್ ಮಾನ್ ಅವರು 6 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಗೆ ಡಿವೋರ್ಸ್ ನೀಡಿದ್ದರು. ಇದು ಅವರಿಗೆ ಎರಡನೇ ಮದುವೆಯಾಗಿದ್ದು, 32 ವರ್ಷದ ಡಾ.ಗುರುಪ್ರೀತ್ ಕೌರ್ ಹಾಗೂ ಭಗವಂತ ಮಾನ್ ಅವರ ವಯದ್ಸಿನ ನಡುವೆ 16 ವರ್ಷಗಳ ಅಂತರವಿದೆ.
ಡಾ.ಗುರುಪ್ರೀತ್ ಕೌರ್ಗೆ ಇಬ್ಬರು ಸಹೋದರಿಯರಿದ್ದಾರೆ. ಇಬ್ಬರು ಕೂಡ ವಿದೇಶದಲ್ಲಿದ್ದಾರೆ. ಭಗವಂತ ಮಾನ್ ಅವರ ನಿಕಟ ಮೂಲಗಳ ಪ್ರಕಾರ, ಎರಡೂ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಸಂಬಂಧ ಇದೆ ಎನ್ನಲಾಗುತ್ತಿದೆ.