
ಮುಸ್ಲಿಂ ಉದ್ಯಮಿಯಿಂದ ಶ್ರೀಕೃಷ್ಣ ದೇವಸ್ಥಾನ ನಿರ್ಮಾಣ: ಕನಸಿನಲ್ಲಿ ಬಂದು ಕೃಷ್ಣನೇ ಪ್ರೇರೇಪಿಸಿದನೆಂದು 42 ಲಕ್ಷ ರೂ.ನಲ್ಲಿ ಭವ್ಯ ದೇಗುಲ
2/17/2022 11:20:00 PM
ರಾಂಚಿ: ಹಿಂದೂ - ಮುಸ್ಲಿಂ ಕೋಮು ಸಂಘರ್ಷ ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ತಾನೇ ರಾಜ್ಯದಲ್ಲಿ ಹಿಜಾಬ್ - ಕೇಸರಿ ವಿವಾದ ಭಾರೀ ಭುಗಿಲೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ನಡುವೆಯೂ ಕೆಲವೆಡೆ ಎರಡೂ ಕೋಮುಗಳ ನಡುವೆ ಸಾರಮಸ್ಯದ ಘಟನೆಗಳೂ ನಡೆಯುತ್ತಲೇ ಇರುತ್ತದೆ. ಅಂಥಹದ್ದೇ ಒಂದು ಘಟನೆಯೊಂದು ಜಾರ್ಖಂಡ್ನಲ್ಲಿ ನಡೆದಿದೆ.
ಇಲ್ಲಿನ ಮುಸ್ಲಿಂ ಉದ್ಯಮಿಯೊಬ್ಬರು ಬರೋಬ್ಬರಿ 42 ಲಕ್ಷ ರೂ. ಖರ್ಚು ಮಾಡಿ ಶ್ರೀ ಕೃಷ್ಣನ ದೇವಸ್ಥಾನವೊಂದನ್ನು ಕಟ್ಟಿಸಿದ್ದಾರೆ. ಜಾರ್ಖಂಡ್‌ನ ದುಮ್ಕಾದ ಮಹೇಶ್‌ಬಥನ್‌ನಲ್ಲಿ ಉದ್ಯಮಿ ನೌಶಾದ್ ಶೇಖ್ 42 ಲಕ್ಷ ರೂ. ವೆಚ್ಚದಲ್ಲಿ ಶ್ರೀಕೃಷ್ಣ ಮಂದಿರವನ್ನು ನಿರ್ಮಿಸಿದ್ದಾರೆ. ಶ್ರೀಕೃಷ್ಣನಿಂದ ಪ್ರಭಾವಿತರಾಗಿರುವ ತಾವು ಈ ದೇವಾಲಯವನ್ನು ಕಟ್ಟಿಸಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ನೌಶಾದ್ ಶೇಖ್ ಅವರು, ಎಲ್ಲಾ ಧರ್ಮೀಯರಿಗೆ ದೇವರು ಒಬ್ಬನೇ. ಆದರೆ ಅವರವರು ತಮ್ಮ ನಂಬಿಕೆಯಂತೆ ದೇವಸ್ಥಾನ, ಮಸೀದಿ ಅಥವಾ ಚರ್ಚ್‌ನಲ್ಲಿ ಪೂಜಿಸುತ್ತಾರೆ. ನಾವು ಎಲ್ಲಿ ದೇವರನ್ನು ಅರಾಧಿಸುತ್ತೇವೆ ಎಂಬುದು ಮುಖ್ಯವಲ್ಲ, ನಾವು ಎಷ್ಟು ಭಕ್ತಿ ಹೊಂದಿದ್ದೇವೆ ಎಂಬುದು ಮುಖ್ಯ. ಕೃಷ್ಣ ಪರಮಾತ್ಮನೇ ತನ್ನ ಕನಸಿನಲ್ಲಿ ಬಂದು ತನಗಾಗಿ ದೇವಸ್ಥಾನವೊಂದನ್ನು ನಿರ್ಮಿಸಲು ಪ್ರೇರೇಪಣೆ ನೀಡಿದ್ದಾನೆ. ನನಗೆ ಕೃಷ್ಣನಲ್ಲಿ ಭಕ್ತಿಯಿದೆ. ನಾನು ಶ್ರೀಕೃಷ್ಣನಿಂದ ಪ್ರಭಾವಿತನಾಗಿದ್ದೇನೆ’ ಎಂದಿದ್ದಾರೆ.
ಕಳೆದ ಸೋಮವಾರ ದೇವಸ್ಥಾನದಲ್ಲಿ ದೇವರ ‘ಪ್ರಾಣ-ಪ್ರತಿಷ್ಠೆ’ ನಡೆದಿದೆ. ಈ ದೇವಾಲಯಕ್ಕೆ ಎಲ್ಲಾ ಸಮುದಾಯದ ಜನರು ಆಗಮಿಸಿ, ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. 3 ವರ್ಷಗಳಲ್ಲಿ ದೇವಾಲಯದ ನಿರ್ಮಾಣ ಕಾರ್ಯ ನಡೆದಿದೆ. ಹಿಂದೂ ಪದ್ಧತಿಯಂತೆ 150 ಬ್ರಾಹ್ಮಣರಿಂದ ‘ಪ್ರಾಣ-ಪ್ರತಿಷ್ಠೆ’ ನೆರವೇರಿಸಲಾಯಿತು.