ಪ್ರಿಯಕರನಿಂದಲೇ ಪತಿಯನ್ನು ಕೊಲ್ಲಿಸಿದ ಪಾಪಿ ಪತ್ನಿ: ಆ್ಯಕ್ಸಿಡೆಂಟ್ ಕಥೆಯನ್ನು ಬೇಧಿಸಿ ಮೂವರನ್ನು ಅರೆಸ್ಟ್ ಮಾಡಿದ ಪೊಲೀಸರು

ಹಾಸನ: ಪ್ರೇಮಿ ಹಾಗೂ ಆತನ ಸ್ನೇಹಿತನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿಸಿ, ಅಪಘಾತ ಎಂದು ಬಿಂಬಿಸಿದ್ದ ಪತ್ನಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯೊಂದಿಗೆ ಪ್ರಿಯಕರ ಹಾಗೂ ಆತನ ಸಹಚರನೂ ಅಂದರ್ ಆಗಿದ್ದಾರೆ. ಈ ಮೂಲಕ ಮುಚ್ಚಿ ಹೋಗಿರುವ ಪ್ರಕರಣವೊಂದನ್ನು ಪೊಲೀಸರು ಭೇದಿಸಿ ಬಯಲಿಗೆಳೆದಿದ್ದಾರೆ. 

ಪತಿಯನ್ನೇ ಕೊಲ್ಲಿಸಿದ ಶ್ರುತಿ‌, ಆಕೆಯ ಪ್ರಿಯಕರ ಚಂದ್ರಶೇಖರ ಹಾಗೂ ಆತನ ಸ್ನೇಹಿತ ಕಿರಣ್ ಬಂಧಿತ ಆರೋಪಿಗಳು. ಕೊಡಗು ಶನಿವಾರಸಂತೆ ನಿವಾಸಿ ಸಂತೋಷ್​ ಪತ್ನಿಯಿಂದಲೇ ಹತ್ಯೆಯಾದ ಪತಿ. 

ಡಿಸೆಂಬರ್ 26ರಂದು ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಮರಡಿಕೆರೆ ಗ್ರಾಮದಲ್ಲಿ ಈ ಪ್ರಕರಣ ನಡೆದಿತ್ತು. ಪತಿಯನ್ನು ಕೊಲೆ ಮಾಡಲು ಈಕೆ ಪ್ರಿಯಕರನಿಗೆ ಮಾಹಿತಿ ನೀಡಿದ್ದಳು.

ಗಾರೆ ಕೆಲಸ ಮುಗಿಸಿ ಬೈಕ್ ನಲ್ಲಿ ಮರಳಿ ಬರುತ್ತಿದ್ದ ಸಂತೋಷ್ ನನ್ನು ಚಂದ್ರಶೇಖರ್ ಮಾರ್ಗಮಧ್ಯೆ  ತಡೆದು ನಿಲ್ಲಿಸಿದ್ದಾನೆ. ತನ್ನ ಕಾರು ಕೆಟ್ಟಿದೆ, ಸಹಾಯಕ್ಕೆ ಬರುವಿರಾ ಎಂದು ಕರೆದಿದ್ದಾನೆ. ಸಹಾಯಕ್ಕೆಂದು ಬಂದ ಸಂತೋಷ್​ ಮೇಲೆ ರಾಡ್​ನಿಂದ ಹಲ್ಲೆ ಮಾಡಿದ ಚಂದ್ರಶೇಖರ ಮತ್ತು ಕಿರಣ್​, ಬಳಿಕ ಮೃತದೇಹವನ್ನು ಬೈಕ್​ ಅಡಿಗೆ ಹಾಕಿ ಅದು ಅಪಘಾತ ಎಂಬಂತೆ ಬಿಂಬಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಇನ್​ಸ್ಪೆಕ್ಟರ್ ಚೈತನ್ಯ ಮತ್ತು ತಂಡ ಈ ಪ್ರಕರಣವನ್ನು ಭೇದಿಸುವ ಮೂಲಕ ಮುಚ್ಚಿಹೋಗಬಹುದಾಗಿದ್ದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಇದೀಗ ಮೂವರೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಕಂಬಿ ಹಿಂದೆ ಕಳುಹಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu