ನೀವು ಪದೇ ಪದೇ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುತ್ತಿದ್ದೀರಾ? ಇಂದೇ ಬಿಟ್ಟುಬಿಡಿ… ಇದರ ಅಪಾಯ ಎಷ್ಟು ಗೊತ್ತೇ?

 

ನೀವು ನಿಯಮಿತವಾಗಿ, ಪದೇ ಪದೇ ನೋವಿನ ನಿವಾರಕ ಮಾತ್ರೆ ತೆಗೆದುಕೊಳ್ಳುತ್ತಿದ್ದೀರಾ? ಇಂದೇ ಬಿಟ್ಟುಬಿಡಿ… ಇದರ ಅಪಾಯ ಎಷ್ಟು ಗೊತ್ತೇ?

ಇಂದು ಸಮಾಜದಲ್ಲಿ ನೋವಿನ ನಿವಾರಕ ಮಾತ್ರೆಗಳು (Pain Killers) ಸಾಮಾನ್ಯ ಆಹಾರ ಪದಾರ್ಥದಂತೆ ಬಳಕೆಯಾಗುತ್ತಿವೆ. ತಲೆನೋವು, ದೇಹನೋವು, ಬೆನ್ನುನೋವು, ಜ್ವರದ ನೋವು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸದೇ ನೇರವಾಗಿ ಮಾತ್ರೆ ಸೇವಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ವೈದ್ಯಕೀಯ ವಿಜ್ಞಾನ ಹೇಳುವುದೇನೆಂದರೆ, ಈ ಚಿಕ್ಕ ಮಾತ್ರೆಯ ಹಿಂದೆ ಭಾರೀ ಅಪಾಯಗಳು ಅಡಗಿವೆ.

ಸಾಮಾನ್ಯವಾಗಿ ಬಳಕೆಯಲ್ಲಿರುವ ನೋವಿನ ನಿವಾರಕ ಮಾತ್ರೆಗಳಲ್ಲಿ ಪ್ಯಾರಾಸಿಟಮಾಲ್, ಐಬುಪ್ರೊಫೆನ್, ಡೈಕ್ಲೋಫಿನ್ಯಾಕ್, ಆಸ್ಪಿರಿನ್, ನ್ಯಾಪ್ರೋಕ್ಸೆನ್ ಮುಂತಾದ ರಾಸಾಯನಿಕ ಅಂಶಗಳು ಇರುತ್ತವೆ. ಇವು ತಾತ್ಕಾಲಿಕವಾಗಿ ನೋವು ಕಡಿಮೆ ಮಾಡುತ್ತವೆ. ಆದರೆ ದೇಹದ ಒಳಗಿರುವ ಲಿವರ್, ಕಿಡ್ನಿ, ಹೊಟ್ಟೆ ಮತ್ತು ಹೃದಯದ ಮೇಲೆ ನಿಧಾನವಾಗಿ ಗಂಭೀರ ಪರಿಣಾಮ ಬೀರುತ್ತವೆ.

ವೈದ್ಯರ ಮೇಲ್ವಿಚಾರಣೆ ಇಲ್ಲದೇ ನಿಯಮಿತವಾಗಿ ಪೇನ್ ಕಿಲ್ಲರ್ ಸೇವಿಸಿದರೆ ಲಿವರ್ ಡ್ಯಾಮೇಜ್, ಕಿಡ್ನಿ ಫೇಲ್ಯೂರ್, ಗ್ಯಾಸ್ಟ್ರಿಕ್ ಅಲ್ಸರ್, ಆಂತರಿಕ ರಕ್ತಸ್ರಾವ, ರಕ್ತದೊತ್ತಡ ಹೆಚ್ಚಳ ಮತ್ತು ಹೃದಯಾಘಾತದ ಅಪಾಯ ಹೆಚ್ಚುತ್ತದೆ. ವಿಶೇಷವಾಗಿ ಪ್ಯಾರಾಸಿಟಮಾಲ್ ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಲಿವರ್ ಸಂಪೂರ್ಣವಾಗಿ ಹಾನಿಗೊಳಗಾಗುವ ಸಾಧ್ಯತೆ ಇದೆ.

ಉದಾಹರಣೆಗಳತ್ತ ಗಮನಹರಿಸಿದರೆ,38 ವರ್ಷದ ಕಾರ್ಮಿಕನೊಬ್ಬ ದಿನನಿತ್ಯ ಬೆನ್ನುನೋವಿಗಾಗಿ ಡೈಕ್ಲೋಫಿನ್ಯಾಕ್ ಮಾತ್ರೆ ಸೇವಿಸುತ್ತಿದ್ದ. ಕೆಲ ತಿಂಗಳುಗಳ ಬಳಿಕ ಅವನಿಗೆ ಕಿಡ್ನಿ ಸಮಸ್ಯೆ ತೀವ್ರವಾಗಿ ಉಂಟಾಗಿ ಡಯಾಲಿಸಿಸ್ ಅಗತ್ಯವಾಯಿತು. ವೈದ್ಯರ ವರದಿ ಪ್ರಕಾರ, ಅವನ ಕಿಡ್ನಿ ಹಾನಿಗೆ ಪ್ರಮುಖ ಕಾರಣ ನಿರಂತರ ಪೇನ್ ಕಿಲ್ಲರ್ ಬಳಕೆಯೇ ಆಗಿತ್ತು.

ಅಂತರರಾಷ್ಟ್ರೀಯ ವೈದ್ಯಕೀಯ ಜರ್ನಲ್‌ಗಳಾದ “The Lancet” ಮತ್ತು “British Medical Journal” ನಲ್ಲಿ ಪ್ರಕಟವಾದ ಅಧ್ಯಯನಗಳ ಪ್ರಕಾರ, ದೀರ್ಘಕಾಲ ನೋವಿನ ನಿವಾರಕ ಮಾತ್ರೆ ಸೇವಿಸುವವರಲ್ಲಿ ಕಿಡ್ನಿ ವೈಫಲ್ಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಶೇ.30 ರಿಂದ 40 ರವರೆಗೆ ಹೆಚ್ಚಾಗುತ್ತದೆ ಎಂದು ತಿಳಿಸಲಾಗಿದೆ.

ವೈದ್ಯರ ಶಿಕ್ಷಣ ಅಥವಾ ಸಲಹೆ ಇಲ್ಲದೇ ಮಾತ್ರೆ ಸೇವಿಸುವುದರಿಂದ ಸಮಸ್ಯೆಯ ಮೂಲ ಕಾರಣ ಮುಚ್ಚಿಹೋಗುತ್ತದೆ. ಉದಾಹರಣೆಗೆ, ತಲೆನೋವು ಮೆದುಳಿನ ಒತ್ತಡ, ರಕ್ತದೊತ್ತಡ ಅಥವಾ ನ್ಯೂರೋ ಸಮಸ್ಯೆಯ ಲಕ್ಷಣವಾಗಿರಬಹುದು. ಆದರೆ ಪೇನ್ ಕಿಲ್ಲರ್ ಸೇವಿಸಿದರೆ ನೋವು ಮಾತ್ರ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ, ಕಾಯಿಲೆ ಒಳಗೊಳಗೆ ಬೆಳೆಯುತ್ತಲೇ ಇರುತ್ತದೆ.

ಆರೋಗ್ಯ ತಜ್ಞರು ನೀಡುವ ಸ್ಪಷ್ಟ ಸಲಹೆ ಏನೆಂದರೆ – ನೋವು ಬಂದ ತಕ್ಷಣ ಮಾತ್ರೆ ಸೇವಿಸುವುದಕ್ಕಿಂತ, ಅದರ ಮೂಲ ಕಾರಣವನ್ನು ಪತ್ತೆಹಚ್ಚುವುದು ಅತ್ಯಗತ್ಯ. ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆಯೊಂದಿಗೆ ಸರಿಯಾದ ಪ್ರಮಾಣದಲ್ಲಿ ಮಾತ್ರೆ ಸೇವಿಸಬೇಕು. ಇಲ್ಲವಾದರೆ, ತಾತ್ಕಾಲಿಕ ಆರಾಮಕ್ಕಾಗಿ ಶಾಶ್ವತ ಆರೋಗ್ಯ ಹಾನಿಯನ್ನು ಆಹ್ವಾನಿಸುವಂತಾಗುತ್ತದೆ.