ನಟಿ ಸಮಂತಾ - ನಿರ್ದೇಶಕ ರಾಜ್ ನಿಡಿಮೋರು ಈಶಾ ಫೌಂಡೇಶನ್‌ನಲ್ಲಿ ವಿವಾಹ


ಹೈದರಾಬಾದ್: ಬಹಳ ಸಮಯಗಳಿಂದ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಸಮಂತಾ ರುತ್ ಪ್ರಭು ಹಾಗೂ ಸಿನಿಮಾ ನಿರ್ದೇಶಕ ರಾಜ್ ನಿಡಿಮೋರು ಸೋಮವಾರ ಬೆಳಗ್ಗೆ ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಶನ್‌ನ ಲಿಂಗ ಭೈರವಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

ಈ ಜೋಡಿ 2024 ರಿಂದ ರಿಲೇಷನ್‌ಶಿಪ್‌ನಲ್ಲಿದೆ ಎಂದು ವದಂತಿಗಳಿವೆ. ಈ ಕುರಿತು ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, 01.12.2025 ಎಂದು ಬರೆದುಕೊಂಡಿದ್ದಾರೆ. ಸಮಂತಾ ಪೋಸ್ಟ್‌ಗೆ ಸ್ಯಾಂಡಲ್‌ವುಡ್ ಕ್ಲೀನ್ ರಮ್ಯಾ ಸೇರಿದಂತೆ ಹಲವಾರು ಮಂದಿ ಶುಭಾಶಯ ಕೋರಿದ್ದಾರೆ. 

ಸಮಂತಾ ರುತ್ ಪ್ರಭು ಆಗ್ಗಾಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ರಾಜ್ ನಿಡಿಮೋರು ಜೊತೆಗಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಇಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ಸಾರ್ವಜನಿಕವಾಗಿ ದೃಢಪಡಿಸಲಿಲ್ಲ.

ಸಮಂತಾ ರುತ್‌ ಪ್ರಭು ಮತ್ತು ರಾಜ್ ನಿಡಿಮೋರು, ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ಮತ್ತು ಸಿಟಾಡೆಲ್: ಹನಿ ಬನ್ನಿಯಲ್ಲಿ ನಟಿ ಮತ್ತು ನಿರ್ದೇಶಕನಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು ಇವೆರಡೂ ಪ್ರೈಮ್ ವಿಡಿಯೋ ವೆಬ್ ಸರಣಿಗಳಾಗಿವೆ. ಅಂದಿನಿಂದ ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ವದಂತಿಗಳು ಕೇಳಿಬಂದಿದ್ದವು. ಅದಕ್ಕೆ ಇಂಬು ನೀಡುವಂತೆ ಇಬ್ಬರು ಆಗ್ಗಾಗ್ಗೆ ಒಟ್ಟಿಗೆ ಕಾಣಿಕೊಳ್ಳುತ್ತಿದ್ದರು.

ಈ ವರ್ಷದ ಆರಂಭದಲ್ಲಿ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವರ್ಲ್ಡ್ ಪಿಕಲ್‌ಬಾಲ್ ಲೀಗ್ ಪಂದ್ಯದ ಹಲವಾರು ಫೋಟೊಗಳನ್ನು ಹಂಚಿಕೊಂಡಾಗ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಪ್ರಾರಂಭವಾದವು. ಸಮಂತಾ ರುತ್ ಪ್ರಭು, ಪಿಕಲ್‌ಬಾಲ್ ತಂಡವಾದ ಚೆನ್ನೈ ಸೂಪರ್ ಚಾಂಪ್‌ನ ಮಾಲೀಕರಾಗಿದ್ದಾರೆ.

ಇತ್ತೀಚೆಗೆ ಸಮಂತಾ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಕೆಲವು ಫೋಟೊಗಳಲ್ಲಿ ರಾಜ್ ನಿಡಿಮೋರು ಇರುವುದು ಕಂಡುಬಂದಿದೆ.

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಇಬ್ಬರಿಗೂ ಇದು ಎರಡನೇ ಮದುವೆ. ಸಮಂತಾ ಈ ಹಿಂದೆ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು ಮತ್ತು 2021ರಲ್ಲಿ ವಿಚ್ಛೇದನ ಪಡೆದರು. ರಾಜ್ ನಿಡಿಮೋರು 2015ರಲ್ಲಿ ಶ್ಯಾಮಲಿ ದೇ ಅವರನ್ನು ಮದುವೆಯಾಗಿದ್ದರು.