![]() |
| AI ಚಿತ್ರ |
ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ : ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ
ಬೆಂಗಳೂರು: ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ಯಮಗಳಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ಸೌಲಭ್ಯ ಒದಗಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲುಗಳ ಸಂಘ (ರಿ) ಹೈಕೋರ್ಟ್ ಮಟ್ಟಿಲೇರಿದೆ.
ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದ್ದು, ಅರ್ಜಿ ಇನ್ನಷ್ಟೇ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಬೇಕಿದೆ.
ಅರ್ಜಿದಾರ ಸಂಘಟನೆಯ ಸದಸ್ಯರು ನಡೆಸುತ್ತಿರುವ ಸಂಸ್ಥೆಗಳಲ್ಲಿ ಕೈಗಾರಿಕೆಗಳ ಸ್ವರೂಪವನ್ನು ಆಧರಿಸಿ ಕಾರ್ಖಾನೆ ಕಾಯ್ದೆ, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಡಿ ನೋಂದಾಯಿಸಿಕೊಳ್ಳಲಾಗಿದೆ. ಈ ಕಾಯಿದೆಗಳು ಕೆಲಸದ ಸಮಯ, ಸಾಪ್ತಾಹಿಕ ರಜಾದಿನಗಳು, ವೇತನದೊಂದಿಗೆ ರಜೆ ಇತ್ಯಾದಿಗಳನ್ನು ಒಳಗೊಂಡಂತೆ ಉದ್ಯೋಗಿಗಳ ಆರೋಗ್ಯ, ಕಲ್ಯಾಣವನ್ನು ನಿಯಂತ್ರಿಸುತ್ತಿವೆ.
ಅಲ್ಲದೆ, ಕರ್ನಾಟಕ ಕೈಗಾರಿಕಾ ಉದ್ಯೋಗ ನಿಯಮಗಳಲ್ಲಿ ಸೇರಿಸಿರುವ ಸ್ಥಾಯಿ ಆದೇಶಗಳ ಷರತ್ತುಗಳ ಪ್ರಕಾರ ವೇತನಸಹಿತ ರಜೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹೀಗಾಗಿ ಕಾನೂನು ಮೂಲಕ ಉದ್ಯೋಗದಾತರು ಉದ್ಯೋಗಿಗಳಿಗೆ ಸಾಕಷ್ಟು ರಜೆಗಳನ್ನು ನೀಡುವುದು ಕಡ್ಡಾಯವಾಗಿದೆ. ಅದರಂತೆ ಕಾರ್ಮಿಕರು ಅಥವಾ ನೌಕರರ ಆರೋಗ್ಯ, ಯೋಗಕ್ಷೇಮ, ವಾರದ ರಜೆ, ಸುರಕ್ಷತೆ ಕೆಲಸದ ಅವಧಿ, ಒಟ್ಟು ರಜೆ ದಿನಗಳು, ವೇತನ ಸಹಿತ ರಜೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಕಾನೂನುಗಳಿದ್ದು, ಅದರಂತೆ ಉದ್ದಿಮೆ, ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ವೇತನಸಹಿತ ಋತುಚಕ್ರ ರಜೆ ಸೌಲಭ್ಯ ಒದಗಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಲಾಗಿದೆ.
ಅರ್ಜಿದಾರರ ದೂರುಗಳೇನು?
- ರಾಜ್ಯ ಸರ್ಕಾರಕ್ಕೆ ಆದೇಶದ ಮೂಲಕ ಕೈಗಾರಿಕಾ ಸಂಸ್ಥೆಗಳಿಗೆ ಮುಟ್ಟಿನ ರಜೆ ಒದಗಿಸುವಂತೆ ನಿರ್ದೇಶನ ನೀಡುವುದಕ್ಕೆ ಯಾವುದೇ ಅಧಿಕಾರವಿಲ್ಲ.
- ಕಾಯ್ದೆಗೆ ತಿದ್ದುಪಡಿ ಇಲ್ಲದೆ ಕಾರ್ಯಕಾರಿ ಆದೇಶದ ಮೂಲಕ ಇಂತಹ ಸೌಲಭ್ಯವನ್ನು ಜಾರಿಗೊಳಿಸಲು ಅವಕಾಶವಿಲ್ಲ.
- ಕೈಗಾರಿಕೆಗಳು ಸೇರಿದಂತೆ ಇತರೆಡೆಗಳಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ನೀತಿಗಳ ಭಾಗವಾಗಿ ರಜೆ ನೀಡುವುದರ ಬಗ್ಗೆ ನಿರ್ಧರಿಸುವುದನ್ನು ಉದ್ಯೋಗದಾತರಿಗೆ ಬಿಡಬೇಕು.
- ಉದ್ಯೋಗದಾತರ ವ್ಯವಹಾರಗಳಲ್ಲಿ ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದೆ. ಇದು ಕಾನೂನು ಬಾಹಿರ ಮತ್ತು ಏಕಪಕ್ಷೀಯ ಕ್ರಮ.
- ಹೆಚ್ಚು ಪ್ರಮಾಣದ ಮಹಿಳಾ ನೌಕರರಿರುವ ಸಂಸ್ಥೆಗಳಲ್ಲಿ ಮುಟ್ಟಿನ ರಜೆ ನೀಡುವುದರಿಂದ ಉದ್ಯೋಗದಾತರಿಗೆ ಆರ್ಥಿಕ ಹೊರೆಯು ಉಂಟಾಗುತ್ತದೆ.
- ಸರ್ಕಾರ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೂ ಮುನ್ನ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಆ ಕಾರ್ಯಕ್ಕೆ ಮುಂದಾಗಿಲ್ಲ.
- ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಮಹಿಳಾ ಸಿಬ್ಬಂದಿಗೆ ಈ ಸೌಲಭ್ಯವನ್ನು ಒದಗಿಸಬೇಕಾಗಿರುವ ರಾಜ್ಯ ಸರ್ಕಾರ, ಈವರೆಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ಯಾವು Tek ತಿದ್ದುಪಡಿ ತಂದಿಲ್ಲ.
- ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೂ ಈ ರೀತಿಯ ಸೌಲಭ್ಯವನ್ನು ಒದಗಿಸಿಲ್ಲ.
- ಈ ಅಧಿಸೂಚನೆ ತಾರತಮ್ಯದ ಸ್ವರೂಪಗಳನ್ನು ಹೊಂದಿದ್ದು ಸಂವಿಧಾನ ಪರಿಚ್ಚೇದ 14 (ಸಮಾನತೆ)ವನ್ನು ಉಲ್ಲಂಘಿಸಿದೆ. ಹೀಗಾಗಿ ಅಧಿಸೂಚನೆ ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ.
ಆದ್ದರಿಂದ ನ್ಯಾಯಪೀಠವು ಸರ್ಕಾರ ಅಧಿಸೂಚನೆ ಸಂಬಂಧ ಮಧ್ಯಪ್ರವೇಶಿಸಿ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
