ಮಂಗಳೂರಿನಲ್ಲಿ ಡಿಕೆ ಸ್ಲೋಗನ್-ವೇಣುಗೋಪಾಲ್ಗೆ ಮುಜುಗರ ಮಾಡಿದ ಮಿಥುನ್ ರೈ ಟೀಮ್
ಕುಡ್ಲ ಕಾಂಗ್ರೆಸ್ ನಲ್ಲೂ ಭಿನ್ನ ರಾಗ!
ಮಂಗಳೂರು: ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಬ್ರೇಕ್ ಫಾಸ್ಟ್ ಮಾಡಿಸಿ ಗೊಂದಲಕ್ಕೆ ತೇಪೆ ಎಳೆಯುವ ಪ್ರಯತ್ನ ಮಾಡಿದ್ದರೆ, ಮಂಗಳೂರಿನಲ್ಲಿ ಮಿಥುನ್ ರೈ ಟೀಂ ಕಾಂಗ್ರೆಸ್ ಕೇಂದ್ರ ಮುಖಂಡ ವೇಣುಗೋಪಾಲ್ ಮುಂದೆಯೇ ಡಿ ಕೆ ಸ್ಲೋಗನ್ ಹಾಕಿ ಭಿನ್ನತೆಯನ್ನು ಮೆರೆದಿದ್ದಾರೆ.
ಮಂಗಳೂರಿನ ಕೊಣಾಜೆಯಲ್ಲಿ ನಡೆಯುವ ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮಕ್ಕೆ ವೇಣುಗೋಪಾಲ್ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಬ್ರೇಕ್ ಫಾಸ್ಟ್ ಸಂಧಾನದಿಂದ ನಿರಾಳವಾಗಿ ಮಂಗಳೂರಿಗೆ ಬಂದಿದ್ದ ವೇಣುಗೋಪಾಲ್ ಗೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದು ಡಿಕೆ ಡಿಕೆ ಸ್ಲೋಗನ್. ಇದರಿಂದ ಕೆ ಸಿ ವೇಣುಗೋಪಾಲ್ ಅವರು ಮುಜುಗರ ಪಡುವಂತಹ ಸನ್ನಿವೇಶ ಸೃಷ್ಟಿಯಾಯಿತು.
ಕೆ ಸಿ ವೇಣುಗೋಪಾಲ್ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ವೇಳೆ ಡಿ ಕೆ ಶಿವಕುಮಾರ್ ಅತ್ಯಂತ ಅತ್ಯಾಪ್ತ ಬಳಗದಲ್ಲಿರುವ ಮಿಥುನ್ ರೈ ತಮ್ಮ ತಂಡದೊಂದಿಗೆ ಬಂದು ಡಿಕೆ ಡಿಕೆ ಎಂಬ ಸ್ಲೋಗನ್ ಹಾಕಿದ್ದಾರೆ. ಕಾಂಗ್ರೆಸ್ ನ ವಿದ್ಯಾರ್ಥಿ ಮುಖಂಡರು, ಮಾಜಿ ಕಾರ್ಪೋರೇಟರ್ ಗಳು ಈ ಸ್ಲೋಗನ್ ಹಾಕುವಲ್ಲಿ ಮುಂಚೂಣಿಯಲ್ಲಿದ್ದರು.
ಮಿಥುನ್ ರೈ ಅವರ ಪ್ರತಿಕ್ರಿಯೆ
ಈ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ಮಿಥುನ್ ರೈ “ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಅವರಿಗೆ ಮತ್ತು ನಾವು ಪಕ್ಷದ ಕಾರ್ಯಕರ್ತರಾಗಿ ಪಕ್ಷದ ಅಧ್ಯಕ್ಷರಿಗೆ ಜೈಕಾರ ಹಾಕಿದ್ದೇವೆ. ಇದು ಪಕ್ಷದ ಕಾರ್ಯಕ್ರಮ. ಸರಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಜೈಕಾರ ಹಾಕುತ್ತೇವೆ.
ಮಾಧ್ಯಮದವರು ಡಿಕೆಶಿ , ಸಿದ್ದರಾಮಯ್ಯ ಬಣ ಎಂದು ಹೇಳ್ತಾರೆ. ನಮ್ಮಲ್ಲಿ ಬಣ ರಾಜಕೀಯ ಇಲ್ಲ. ಸಿದ್ದರಾಮಯ್ಯ ಅವರು ಎಂದಿಗೂ ಕುರ್ಚಿಯ ಹಿಂದೆ ಹೋದ ನಾಯಕರಲ್ಲ. ಅವರು ಇನ್ನೊಬ್ಬರಿಗೆ ನಾಯಕತ್ವ ಕೊಟ್ಟವರು. ಸಿದ್ದರಾಮಯ್ಯ ಅವರೇ ಡಿಕೆಶಿ ಅವರಿಗೆ ಅವಕಾಶ ಕೊಡ್ತಾರೆ. ನಮಗೆ ಇಬ್ಬರು ನಾಯಕರೇ ಎಂದು ಸಮಾಧಾನಿಸಿ ಕೊಟ್ಟರು.”
ಒಟ್ಟಾರೆಯಾಗಿ ಮಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಬೆಂಬಲಿಗರ ಉತ್ಸಾಹ ಮತ್ತು ಭಿನ್ನ ರಾಗ ಸ್ಪಷ್ಟವಾಗಿ ಕಂಡುಬಂದಿದೆ. ಹೈಕಮಾಂಡ್ ಮುಂದೆಯೇ ಡಿಕೆ ಸ್ಲೋಗನ್ ಕೂಗಿ ತಮ್ಮ ನಿಲುವನ್ನು ದೃಢಗೊಳಿಸಿದ್ದಾರೆ.
