ಮದುವೆ ಊಟದಲ್ಲಿ ಗೋಮಾಂಸ ಬಳಕೆ ಆರೋಪ: ಸಂಭ್ರಮಕ್ಕೆ ಕಿಚ್ಚು ಹೊತ್ತಿಸಿದ ಭೀಫ್..
ಅಲಿಘಡ: ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಊಟದ ಜೊತೆಗೆ ಗೋಮಾಂಸವನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ, ಇಡೀ ಸಂಭ್ರಮವನ್ನೇ ಹಾಳು ಪಡೆದಿದೆ. ಈ ಬಗ್ಗೆ ತೀವ್ರ ವಾಗ್ವಾದ ಉಂಟಾಗಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಸದ್ಯ ಆಹಾರದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೂರು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ. ಮದುವೆ ಊಟದಲ್ಲಿ ಗೋಮಾಂಸ ಬಳಸಲಾಗಿತ್ತೇ ಎಂಬುದು ಪ್ರಯೋಗಾಲಯದ ವರದಿಯಲ್ಲಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಇಲ್ಲಿನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದ ವಿವಾಹದಲ್ಲಿ ಊಟದ ಕೌಂಟರ್ನಲ್ಲಿ 'ಗೋಮಾಂಸ ಕರಿ' ಎಂದು ಬರೆದಿರುವ ಸ್ಟಿಕ್ಕರ್ ಕಂಡು ಇಬ್ಬರು ಅತಿಥಿಗಳು ಇದನ್ನು ವಿರೋಧಿಸಿದ್ದಾರೆ. ಜೊತೆಗೆ ಇದರ ವಿಡಿಯೋವನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಇದು ಗಲಾಟೆಗೆ ಕಾರಣವಾಗಿದೆ.
ಈ ಕುರಿತು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸ್ ತಂಡ ಮತ್ತು ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಧಿವಿಜ್ಞಾನ ಪರೀಕ್ಷೆಗಾಗಿ ಆಹಾರದ ಮಾದರಿಗಳನ್ನು ಸಂಗ್ರಹಿಸಿದರು. ಅಡುಗೆ ತಯಾರಕರು ಮತ್ತು ಅತಿಥಿಗಳ ನಡುವೆ ವಾಗ್ವಾದ ಉಂಟಾಗಿದೆ. ಈ ಕುರಿತು ಮೂವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ರಾತ್ರಿಯ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಸರ್ವಂ ಸಿಂಗ್ ಹೇಳಿದ್ದಾರೆ.
ವಿಧಿವಿಜ್ಞಾನದ ವರದಿ ಬಂದ ಬಳಿಕ ಗೋಮಾಂಸ ಬಳಸಲಾಗಿತ್ತೇ, ಇಲ್ಲವೇ ಎಂಬುದು ತಿಳಿಯಲಿದೆ. ಆ ಬಳಿಕವೇ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲಾಗಿದೆ ಎಂದು ಆರೋಪಿಸಿ ಅತಿಥಿಯೊಬ್ಬರು ಅಡುಗೆ ತಯಾರಕರ ವಿರುದ್ದ ಲಿಖಿತ ದೂರು ಸಲ್ಲಿಸಿದ್ದಾರೆ. ಉತ್ತರಪ್ರದೇಶದಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆ. ಆದರೆ, ಎಮ್ಮೆ ಮಾಂಸ ಚಾಲ್ತಿಯಲ್ಲಿದೆ. ಎರಡಕ್ಕೂ ಒಂದೇ ಪದ ಬಳಕೆ ಕಾರಣ, ಗೊಂದಲಕ್ಕೆ ಕಾರಣವಾಗಿದೆ. ಇದು ಆಗಾಗ್ಗೆ ಉದ್ವಿಗ್ನತೆಗೆ ಕಾರಣವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಸುದ್ದಿ ಹರಡುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರು ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
ಇತ್ತ, ಬಿಎಸ್ಪಿ ನಾಯಕ ಸಲ್ಮಾನ್ ಶಾಹಿದ್ ಅವರು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯನ್ನು ಟೀಕಿಸಿದ್ದಾರೆ. ಇದು ಉಗ್ರರ ವರ್ತನೆಯಂತಿದೆ. ಘಟನೆಯ ಬಗ್ಗೆ ತಪ್ಪು ತಿಳಿವಳಿಕೆಯಿಂದಾಗಿ ಈ ಬಿಕ್ಕಟ್ಟು ಉದ್ಭವಿಸಿದೆ ಎಂದು ತಿಳಿಸಿದ್ದಾರೆ.
