ಪುಣೆ: ದ್ವಿಚಕ್ರ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ವಡಾಪಾವ್ ತರಲು ಹೋಗಿ ಬರುವಷ್ಟರಲ್ಲಿ ವೃದ್ಧ ದಂಪತಿಯ ಸ್ಕೂಟಿಯಲ್ಲಿದ್ದ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಖತರ್ನಾಕ್ ಖದೀಮರು ಎಗರಿಸಿ ಕೊಂಡೊಯ್ದು ಘಟನೆ ನಡೆದಿದೆ.
ಬ್ಯಾಂಕಿನಲ್ಲಿದ್ದ ತಮ್ಮ ಆಭರಣವನ್ನು ತೆಗೆದುಕೊಂಡು ವೃದ್ಧ ದಂಪತಿ ಸ್ಕೂಟರ್‌ನಲ್ಲಿ ಮನೆಗೆ ಬರುತ್ತಿದ್ದರು. ದಾರಿ ಮಧ್ಯೆ ಈ ದಂಪತಿಗೆ ವಡಾಪಾವ್ ತಿನ್ನುವ ಆಸೆಯಾಗಿದೆ ಅದರಂತೆ ಹೋಟೆಲ್ ಬಳಿ ತಮ್ಮ ಸ್ಕೂಟಿ ನಿಲ್ಲಿಸಿ ಪತಿ ವಡಾಪಾವ್ ತರಲು ಹೋಗಿದ್ದಾರೆ. ಪತ್ನಿ ಸ್ಕೂಟಿ ಬಳಿಯೇ ನಿಂತಿದ್ದು, ಇದನ್ನು ಗಮನಿಸಿದ ಇಬ್ಬರು ಖತರ್ನಾಕ್ ಖದೀಮರು ಸ್ಕೂಟಿ ಬಳಿ ಹೊಂಚು ಹಾಕುತ್ತಿದ್ದರು. ಇದು ವೃದ್ಧೆಯ ಗಮನಕ್ಕೆ ಬಂದಿರಲಿಲ್ಲ. ಅಲ್ಲಿಗೆ ಬಂದ ಓರ್ವ ಬೈಕಿನಲ್ಲಿ ಬಂದು ವೃದ್ಧ ಮಹಿಳೆಯ ಬಳಿ ಹಣ ಬಿದ್ದಿದೆ ಎಂದು ಹೇಳುತ್ತಾನೆ. ಆತನ ಮಾತು ನಂಬಿ ಸ್ಕೂಟಿಯ ಹಿಂಬದಿಗೆ ಮಹಿಳೆ ಹೋದದ್ದನ್ನು ಗಮನಿಸುತ್ತಿದ್ದ ಇನ್ನೋರ್ವ ತಕ್ಷಣ ಸ್ಕೂಟಿಯ ಎದುರು ಇರಿಸಿದ್ದ ಚಿನ್ನಾಭರಣಗಳ ಬ್ಯಾಗ್ ಅನ್ನು ಎಗರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಇತ್ತ ಕಳ್ಳ ಬ್ಯಾಗ್ ಎಗರಿಸುತ್ತಿರುವುದನ್ನು ಗಮನಿಸಿದ ಮಹಿಳೆ ಬೊಬ್ಬೆ ಹೊಡೆದಿದ್ದಾರೆ. ಜನ ಬರುತ್ತಿದ್ದಂತೆ ಕಳ್ಳರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.