ಮಂಗಳೂರು: ನಗರದ ಬಲ್ಮಠ ಬಳಿಯ ಮಂಗಳೂರು ನರ್ಸಿಂಗ್ ಹೋಮ್ ಮುಂಭಾಗದ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದು ,ಇದರಲ್ಲಿ ಓರ್ವನನ್ನು ರಕ್ಷಣೆ ಮಾಡಲಾಗಿದೆ.
ಬಿಹಾರದ ರಾಜ್ ಕುಮಾರ್ ಎಂಬಾತನನ್ನು ರಕ್ಷಣೆ ಮಾಡಲಾಗಿದ್ದು, ಉತ್ತರಪ್ರದೇಶದ ಚಂದನ್ ಕುಮಾರ್ ನನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಸ್ಥಳದಲ್ಲಿ ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಕಾರ್ಯಾಚರಣೆ ನಡೆಸುತ್ತಿದ್ದು ಕಾರ್ಮಿಕನ ಪ್ರಾಣ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಸ್ಥಳದಲ್ಲಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಡಿಸಿ ಸಂತೋಷ್ ಕುಮಾರ್, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿ ಸಿದ್ದಾರ್ಥ್ ಗೋಯಲ್ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಕಟ್ಟಡಕ್ಕೆ ವಾಟರ್ ಪ್ರೂಫ್ ಮಾಡುತ್ತಿದ್ದ ವೇಳೆ ಕಟ್ಟಡದ ಬದಿಯಲ್ಲಿದ್ದ ಮಣ್ಣು ಏಕಾಏಕಿ ಕುಸಿದಿದೆ. ಆದರೆ ಅಡ್ಡಲಾಗಿ ಸ್ಲ್ಯಾಬ್ ಇದ್ದ ಕಾರಣ ಅವರ ಮೇಲೆ ಮಣ್ಣು ಬಿದ್ದಿಲ್ಲ. ಅವರಿಗೆ ಬಿಲ್ಡಿಂಗ್ ಕೊರೆದು ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ. ಅದೇ ರೀತಿ ನೀರು ಆಹಾರ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳದಲ್ಲಿ ಆರೋಗ್ಯ ಇಲಾಖೆ ಆಗಮಿಸಿದ್ದು, ಕಾರ್ಯಾಚರಣೆ ನಡೆದ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್ ಕೂಡ ತಯಾರು ಮಾಡಲಾಗಿದೆ.