ಬೆಳ್ತಂಗಡಿ: ತಾಲೂಕಿನ ಕುಕ್ಕಾವು, ಕೂಡಬೆಟ್ಟುವಲ ಎಂಬಲ್ಲಿ ಕೇವಲ ಕೇವಲ 160 ಅಡಿ ಆಳ ಕೊಳವೆಬಾವಿ ಕೊರೆಯುತ್ತಿದ್ದಂತೆಯೇ ಏಕಾಏಕಿ ನೀರು ಉಕ್ಕಿ ಬಂದು ಅಘಟಿತ ವಿಸ್ಮಯವೊಂದು ನಡೆದಿದೆ.
ಕೂಡಬೆಟ್ಟು ರಾಮಕೃಷ್ಣ ರಾವ್ ಎಂಬವರ ಮನೆಯಲ್ಲಿ ಎ.30ರಂದು ಸಂಜೆ ಕೊಳವೆಬಾವಿ ಕೊರೆಯಲಾಗಿತ್ತು. ಆದರೆ ಕೇವಲ 160 ಅಡಿ ಆಳ ಭೂಮಿಯನ್ನು ಕೊರೆಯುತ್ತಿದ್ದಂತೆ ಒಮ್ಮೆಲೆ ನೀರು ಉಕ್ಕಿ ಬಂದಿದೆ. ಅಲ್ಲದೆ ಈ ಕೊಳವೆ ಬಾವಿಯಿಂದ ನಿರಂತರವಾಗಿ ನೀರು ಹರಿಯುತ್ತಲೇ ಇದೆ.
ನೇತ್ರಾವತಿ ನದಿಯಲ್ಲಿ ನೀರು ಕಡಿಮೆಯಿದ್ದು, ಈ ಪರಿಸರದಲ್ಲಿ ನೀರಿಗೆ ಸಮಸ್ಯೆಯುಂಟಾಗಿದೆ. ಆದ್ದರಿಂದ ಹಲವರು ತಮ್ಮ ತೋಟಗಳಲ್ಲಿ ಕೊಳವೆಬಾವಿ ಕೊರೆಯುತ್ತಿದ್ದಾರೆ. ನಡ ಗ್ರಾಮದ ಬೋಜಾರ ಕರುಣಾಕರ ಗೌಡ ಅವರು ನೀರಿನ ಪಾಯಿಂಟ್ ನೋಡಿದ್ದರು. ಕಳೆದ 13 ವರ್ಷಗಳಿಂದ ಸಾವಿರಾರು ನೀರಿನ ಪಾಯಿಂಟ್ ನೋಡಿದ್ದೇನೆ. ಆದರೆ ಈ ರೀತಿ ನೀರು ಉಕ್ಕಿ ಹರಿಯುತ್ತಿರುವುದು ಇದೇ ಮೊದಲ ಬಾರಿ ಎಂದು ಬೋಜಾರ ಕರುಣಾಕರ ಗೌಡ ಹೇಳುತ್ತಾರೆ.