ಮಂಗಳೂರು: ವೃದ್ಧ ಮಾವನಿಗೆ ಮನಸೋ ಇಚ್ಛೆ ಥಳಿಸಿದ ಸೊಸೆ - ಕೆಇಬಿ ಅಧಿಕಾರಿಯ ರಾಕ್ಷಸಿ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Monday, March 11, 2024
ಮಂಗಳೂರು: ವೃದ್ಧ ಮಾವನಿಗೆ ಸೊಸೆಯೊಬ್ಬಳು ಅಮಾನವೀಯವಾಗಿ ಥಳಿಸಿರುವ ರಾಕ್ಷಸೀ ಕೃತ್ಯವೊಂದು ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ.
ಪದ್ಮನಾಭ ಸುವರ್ಣ (87) ಎಂಬವರು ಸೊಸೆಯಿಂದಲೇ ಥಳಿತಕ್ಕೊಳಗಾದ ದುರ್ದೈವಿ. ಉಮಾಶಂಕರಿ ಎಂಬಾಕೆಯೇ ಮಾವನಿಗೆ ಮನಸೋಇಚ್ಛೆ ಥಳಿಸಿದ ಸೊಸೆ.
ಮಂಗಳೂರು ನಗರದ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿರುವ ಉಮಾಶಂಕರಿ ಮಾವನಿಗೆ ವಾಕಿಂಗ್ ಸ್ಟಿಕ್ ನಿಂದ ಥಳಿಸಿದ್ದಾಳೆ. ಈ ವೇಳೆ ಪದ್ಮನಾಭ ಸುವರ್ಣ ಅವರು ಹೊಡೆಯದಿರುವಂತೆ ತಡೆಯಲು ಬಂದಾಗ ಅವರನ್ನು ತಳ್ಳಿದ್ದಾಳೆ. ಪರಿಣಾಮ ಪದ್ಮನಾಭ ಸುವರ್ಣ ಅವರು, ಸೋಫಾದ ಮೇಲೆಯೇ ಬಿದ್ದು ನೋವಿನಿಂದ ಅಳುತ್ತಿರುವ ಧ್ವನಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಉಮಾಶಂಕರಿ ಪತಿ ಪ್ರೀತಂ ಸುವರ್ಣ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅವರು ವಿದೇಶದಲ್ಲಿದ್ದುಕೊಂಡೇ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಸೊಸೆಯ ರಾಕ್ಷಸಿ ಕೃತ್ಯ ಬೆಳಕಿಗೆ ಬಂದಿದೆ. ಈ ಘಟನೆ ಮಾರ್ಚ್ 9ರಂದು ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ಪದ್ಮನಾಭ ಸುವರ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಪತಿಯೇ ಪೊಲೀಸ್ ದೂರು ನೀಡಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.