ಮಂಗಳೂರು: ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಮೂರು ಲಕ್ಷ ರೂ. ದಂಡ

ಮಂಗಳೂರು: ರಸ್ತೆಯ ವಿಚಾರದಲ್ಲಿ ವಾಗ್ವಾದ ನಡೆದು ಚೂರಿಯಿಂದ ಇರಿದು ಕೊಲೆಗೈದಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಓರ್ವನಿಗೆ ಮಂಗಳೂರಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಮೂರು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಬೆಳ್ತಂಗಡಿ ಲಾಯಿಲಾ ಗ್ರಾಮದ ಗಾಂಧಿನಗರ ನಿವಾಸಿ ಯೋಗೀಶ(55) ಶಿಕ್ಷೆಗೊಳಗಾದ ಅಪರಾಧಿ.

ಯೋಗೀಶನಿಗೆ ಸೇರಿದ ಭೂಮಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣವಾದ ಮಣ್ಣಿನ ರಸ್ತೆಯನ್ನು ತಮ್ಮ ಮನೆಗೆ ದಾರಿಯಾಗಿ ಹತ್ಯೆಗೊಳಗಾದ ಉಮೇಶ್ ಹಾಗೂ ಅವರ ಕುಟುಂಬಸ್ಥರು ಬಳಸುತ್ತಿದ್ದರು‌. ಯೋಗೀಶ್ 2020ರ ಫೆಬ್ರವರಿ 9ರಂದು ಈ ರಸ್ತೆಯನ್ನು ಮುಚ್ಚುವ ಉದ್ದೇಶದಿಂದ ಅಡ್ಡಯಿಟ್ಟು ತಡೆವೊಡ್ಡುತ್ತಿದ್ದನು. ಇದನ್ನು ಗಮನಿಸಿದ ಉಮೇಶ್ ಹಾಗೂ ಅವರ ಕುಟುಂಬದವರು ಅಡ್ಡವಿಡುತ್ತಿರುವುದನ್ನು ತೆಗೆಯಬೇಕೆಂದು ಕೇಳಿಕೊಂಡಿದ್ದಾರೆ. ಈ ವೇಳೆ ಯೋಗೀಶ್ ಹಾಗೂ ಆತನ ಮಗ ಜೀವನ್ ಇವರನ್ನು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಕಬ್ಬಿಣದ ಸರಳುಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಇದಕ್ಕೆ ಪ್ರತಿರೋಧ ಒಡ್ಡಿದಾಗ ಯೋಗೀಶ್ ಚೂರಿಯಿಂದ ಉಮೇಶ್ ಅವರ ಎದೆ ಹಾಗೂ ಭುಜಕ್ಕೆ ಚುಚ್ಚಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕಲಿಲ್ಲ.

ಆರೋಪಿಗಳಾದ ಯೋಗೀಶ್ ಹಾಗೂ ಜೀವನ್ ರನ್ನು ಬೆಳ್ತಂಗಡಿ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಠಾಣೆಯ ಅಂದಿನ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ.ಯವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಎರಡನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಪ್ರಕರಣದ ವಿಚಾರಣೆ ನಡೆಸಿ, ವಾದ-ವಿವಾದವನ್ನು ಆಲಿಸಿದ ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಯೋಗೀಶ್ ಗೆ ಜೀವಾವಧಿ ಶಿಕ್ಷೆ ಹಾಗೂ ಮೂರು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಎರಡನೇ ಆರೋಪಿ ಜೀವನ್ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದಾನೆ. ಸರಕಾರದ ಪರವಾಗಿ ಅಭಿಯೋಜಕಿ ಜ್ಯೋತಿ ಪ್ರಮೋದಾ ನಾಯಕ್ ವಾದಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu