ಮಂಗಳೂರು: ಕೆಪಿಎಸ್ ಸಿ ಪರೀಕ್ಷಾ ಕೇಂದ್ರದ ತಪಾಸಣೆಗೆ ಸಣ್ಣ ಮಕ್ಕಳನ್ನು ಬಳಕೆ - ಅಧಿಕಾರಿಗಳ ಎಡವಟ್ಟು


ಮಂಗಳೂರು: ನಗರದ ಬಲ್ಮಠ ಪಿಯು ಕಾಲೇಜಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ)ದ ಪರೀಕ್ಷಾ ಕೇಂದ್ರದಲ್ಲಿ ಭಾರೀ ಎಡವಟ್ಟು ನಡೆದಿದ್ದು, ಪರೀಕ್ಷಾರ್ಥಿಗಳ ತಪಾಸಣೆಗೆ ಸಣ್ಣ ಮಕ್ಕಳನ್ನು ಬಳಕೆ ಮಾಡಿರುವುದು ಕಂಡು ಬಂದಿದೆ. 

ರಾಜ್ಯ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರ ಹುದ್ದೆಗೆ ಮಂಗಳೂರಿನ ಬಲ್ಮಠ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಇಂದು ಪರೀಕ್ಷೆ ನಡೆಯುತ್ತಿದೆ. ಆದರೆ ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳ ತಪಾಸಣೆಗೆ ಸಣ್ಣ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಸ್ಪಷ್ಟ ನಿದರ್ಶನ.


ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಏಳೆಂಟು ಮಂದಿ ಸಣ್ಣ ಮಕ್ಕಳು ಮೆಟಲ್ ಡಿಟೆಕ್ಟರ್ ಹಿಡಿದು ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡುತ್ತಿದ್ದರು‌. ಸರಿಯಾಗಿ ತಪಾಸಣೆ ನಡೆಯದೆಯೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುತ್ತಿದ್ದರು. ನಕಲು ಮತ್ತು ಇಲೆಕ್ಟ್ರಾನಿಕ್ ಉಪಕರಣ ಬಳಕೆ ತಡೆಯಲು ಮೊಬೈಲ್ ಜಾಮರ್, ಮೆಟಲ್ ಡಿಟೆಕ್ಟರ್, ಬಯೋ ಮೆಟ್ರಿಕ್ ಫೇಸ್ ಡಿಟೆಕ್ಷನ್ ಹಾಗೂ ಬಾಡಿ ಕ್ಯಾಮರಾ ಬಳಕೆ ಮಾಡಬೇಕೆಂದು ಕರ್ನಾಟಕ ಲೋಕಸೇವಾ ಆಯೋಗ ಸೂಚಿಸಿತ್ತು.‌ ಆದರೆ ಸಣ್ಣ ಮಕ್ಕಳನ್ನು ಬಳಸಿ ಅಧಿಕಾರಿಗಳು ಕಾಟಾಚಾರದ ತಪಾಸಣೆ ನಡೆಸುತ್ತಿದ್ದರು.


ಬಲ್ಮಠ ಕಾಲೇಜು ಸೇರಿ ಮಂಗಳೂರಿನ ಮೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಭದ್ರತೆಯ ಅರಿವೇ ಇಲ್ಲದ ಮಕ್ಕಳನ್ನು ಪರೀಕ್ಷಾ ಕೇಂದ್ರದ ಭದ್ರತೆಗೆ ನೇಮಕ ಮಾಡಲಾಗಿತ್ತು. ಬಯೋ ಮೆಟ್ರಿಕ್ ವ್ಯವಸ್ಥೆ ಕೂಡ ಇಲ್ಲದೇ, ಕೆಪಿಎಸ್ಸಿ ಪರೀಕ್ಷಾ ನಿಯಮಗಳನ್ನು ಪಾಲಿಸದೇ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ.