ಮಂಗಳೂರು: ಭಟ್ಕಳ ಬ್ರದರ್ಸ್ ರೀತಿ ತೀರ್ಥಹಳ್ಳಿ ಬ್ರದರ್ಸ್ ಗಳಿಂದ ಭಯೋತ್ಪಾದನೆ ಕೃತ್ಯ - ನಳಿನ್ ಕುಮಾರ್ ಕಟೀಲು
Monday, October 2, 2023
ಮಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಈ ರೀತಿ ಆಗುತ್ತಿದೆ. ರಾಜ್ಯದಲ್ಲಿ ಪಾಕಿಸ್ತಾನ ಧ್ವಜ ಹಾರಾಟ, ಪಾಕ್ ಪರ ಘೋಷಣೆ ಕೇಳಿ ಬರುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಾಣುತ್ತಿದೆ. ಆದ್ದರಿಂದ ಶಿವಮೊಗ್ಗ ಈದ್ ಮಿಲಾದ್ ಸಂಘರ್ಷವನ್ನು ಖಂಡಿಸುತ್ತೇನೆ ಎಂದು ಹೇಳಿದರು.
ಆದರೆ ಶಿವಮೊಗ್ಗ ಗಲಭೆಯ ಹಿಂದೆ ಮತಾಂಧ ಶಕ್ತಿಗಳ ಕೈವಾಡವಿದೆ. ಈದ್ ಮೆರವಣಿಗೆಯಲ್ಲಿ ಹಿಂದೂಗಳ ಅಂಗಡಿ, ಮನೆಗಳ ಮೇಲೆ ದಾಳಿಯಾಗಿದೆ. ಮಂಗಳೂರು ಕುಕ್ಕರ್ ಬಾಂಬ್ ನಲ್ಲಿ ಶಿವಮೊಗ್ಗದ ನಂಟಿದೆ. ಭಟ್ಕಳ ಬ್ರದರ್ಸ್ ರೀತಿಯಲ್ಲಿ ತೀರ್ಥಹಳ್ಳಿ ಬ್ರದರ್ಸ್ ಮೂಲಕ ಚಟುವಟಿಕೆ ಆಗುತ್ತಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳದೇ ಶಾಂತಿ ಸುವ್ಯವಸ್ಥೆ ವಿಫಲವಾಗಿದೆ ಎಂದರು.
ಈ ಘಟನೆಯಲ್ಲಿ ಆತಂಕವಾದಿಗಳ ಕೈವಾಡವಿದೆಯೇ ಎಂದು ತನಿಖೆ ಮಾಡಬೇಕು. ಇದರ ಪೂರ್ಣ ತನಿಖೆ ಆಗಲಿ. ಸಿಎಂ ಮತಬೇಟೆಗಾಗಿ ಇದರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಹರ್ಷ ಮತ್ತು ಪ್ರವೀಣ್ ಹತ್ಯೆ ಬಳಿಕ ನಮ್ಮ ಸರ್ಕಾರ ಕಠಿಣ ಕ್ರಮಕೈಗೊಂಡಿತ್ತು. ಈ ಸರ್ಕಾರ ಸಣ್ಣಮಟ್ಟದ ರಾಜಕಾರಣ ಮಾಡುತ್ತಿದೆ. ತುಷ್ಟೀಕರಣ ನೀತಿ ಮೂಲಕ ಮತಾಂಧ ಶಕ್ತಿಗಳಿಗೆ ಮತ್ತೆ ಧೈರ್ಯ ಬಂದಿದೆ. ಕೋಲಾರದಲ್ಲಿ ತಲ್ಬಾರ್ ದ್ವಾರ ಹಾಕಿದಾಗಲೇ ಇವರು ಎಚ್ಚೆತ್ತುಕೊಳ್ಳಬೇಕಿತ್ತು. ಐಎನ್ ಡಿ ಒಕ್ಕೂಟ ಹಾಗೂ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.