ಕುಟುಂಬಕ್ಕೆ ಶಾಂತಿ - ಯಶಸ್ಸು ಬರುತ್ತದೆಂದು ನಂಬಿಸಿ ಮಹಿಳೆಯ ಮೇಲೆ ಐವರಿಂದ ನಿರಂತರ ಅತ್ಯಾಚಾರ
Sunday, September 17, 2023
ಮಹಾರಾಷ್ಟ್ರ: ಕುಟುಂಬಕ್ಕೆ ಶಾಂತಿ - ಯಶಸ್ಸು ಬರುತ್ತದೆಂದು ನಂಬಿಸಿ ಮಹಿಳೆಯೊಬ್ಬಳ ಮೇಲೆ ಐವರು ನಿರಂತರ ಅತ್ಯಾಚಾರಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ 35 ವರ್ಷದ ಮಹಿಳೆ ಮೇಲೆ ಈ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಸಂತ್ರಸ್ತೆಯ ಪತಿಯ ಸ್ನೇಹಿತರು. ಮಹಿಳೆಯ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪಿಗಳು ಮನೆಯಲ್ಲಿನ ವಾಸ್ತು ಸಮಸ್ಯೆ ಹೋಗಲಾಡಿಸುವುದಾಗಿ ಹೀಗೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿನ ದುಷ್ಟಶಕ್ತಿಯನ್ನು ತೊಲಗಿಸಲು ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸಿ ಯಶಸ್ಸು ಸಿಗುವಂತೆ ಮಾಟಮಂತ್ರ ಮಾಡುವುದಾಗಿ ಆರೋಪಿಗಳು ಹೇಳಿದ್ದರು. ಕೊನೆಗೆ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಚಾರ ತನಿಖೆಯ ವೇಳೆ ಗೊತ್ತಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.