ಲೋನ್ ಆ್ಯಪ್ ಕಿರುಕುಳಕ್ಕೆ ಇಡೀ ಕುಟುಂಬವೇ ಸರ್ವನಾಶ: ಸತ್ತ ಬಳಿಕವೂ ಬೆತ್ತಲೆ ವೀಡಿಯೋ ಹರಿಯಬಿಟ್ಟ ರಾಕ್ಷಸರು


ತಿರುವನಂತಪುರಂ: ಇತ್ತೀಚೆಗಷ್ಟೇ ಕೇರಳದ ಎರ್ನಾಕುಲಂನ ಕದಮಕ್ಕುಡಿಯಲ್ಲಿ ಒಂದೇ ಕುಟುಂಬದ ನಾಲ್ವರು ಮನೆಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದರು. ಆರ್ಥಿಕ ಮುಗ್ಗಟ್ಟು ಈ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಇದೀಗ ಇಡೀ ಕುಟುಂಬದ ದುರಂತ ಸಾವಿನ ಹಿಂದೆ ಲೋನ್​ ಗ್ಯಾಂಗ್​ನ ಕರಾಳ ಛಾಯೆ ಇರುವುದು ಬಯಲಾಗಿದೆ. ಆನ್​​ಲೈನ್​ ಲೋನ್​ ವಂಚನೆ ಜಾಲಕ್ಕೆ ಸಿಲುಕಿ ಇಡೀ ಕುಟುಂಬ ನಾಶವಾಗಿರುವುದು ಪೊಲೀಸ್​ ತನಿಖೆಯಿಂದ ಬಯಲಾಗಿದೆ.

ಕದಮಕ್ಕುಡಿ ನಿವಾಸಿ ನಿಜೋ (39), ಅವರ ಪತ್ನಿ ಶಿಲ್ಪ (29) ಮತ್ತು ಮಕ್ಕಳಾದ ಆಬಲ್​ (7) ಮತ್ತು ಆ್ಯರೂನ್​ (5) ಮೃತಪಟ್ಟವರು.

ಇಡೀ ಕುಟುಂಬವೇ ನಾಶವಾಗಿ ಮೂರು ದಿನಗಳು ಕಳೆದರೂ ಲೋನ್​ ಆ್ಯಪ್ ​ಗ್ಯಾಂಗ್ ಮಾತ್ರ ಹಣದ ಮೇಲಿನ ತಮ್ಮ ದಾಹ ನಿಲ್ಲಿಸಿಲ್ಲ. ಈ ಕಟುಕರಿಗೆ ಕರುಣೆ ಎಂಬುದೇ ಇಲ್ಲ. ಏಕೆಂದರೆ, ಸಾವಿನ ಬಳಿಕವೂ ಮೃತ ಶಿಲ್ಪಾಳ ತಿರುಚಿದ ಬೆತ್ತಲೆ ಫೋಟೋವನ್ನು ಆಶಾ ಕಾರ್ಯಕರ್ತೆ ಶೀಬಾ ಜೀವನ್​ ಎಂಬುವರಿಗೆ ಕಳುಹಿಸಿದ್ದಾರೆ. ಶಿಲ್ಪಾ ಫೋನ್​ ಲೀಸ್ಟ್​ನಲ್ಲಿದ್ದ ಸುಮಾರು 25 ನಂಬರ್​ಗಳಿಗೆ ಬೆತ್ತಲೆ ಚಿತ್ರ ರವಾನೆಯಾಗಿದೆ. ಫೋಟೋ ಸ್ವೀಕರಿಸಿದವರು ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು ಲೋನ್​ ಗ್ಯಾಂಗ್​ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕುಟುಂಬದ ಸಾವಿನ ಹಿಂದೆ ಲೋನ್​ ಗ್ಯಾಂಗ್​ ಕೈವಾಡ ಇದೆ. ಸದ್ಯ ಪೊಲೀಸ್​ ತನಿಖೆ ನಡೆಯುತ್ತಿದೆ. ವಡಕ್ಕೆಕರಾ ಪೊಲೀಸ್​ ಠಾಣೆಯ ವಿ.ಸಿ. ಸೂರಜ್​ ತನಿಖೆಯ ನೇತೃತ್ವ ವಹಿಸಿದ್ದಾರೆ. ಶಿಲ್ಪಾ ಮತ್ತು ನಿಜೋ ಅವರ ಮೊಬೈಲ್ ಫೋನ್‌ಗಳನ್ನು ಇನ್ನೂ ಪರಿಶೀಲಿಸಿಲ್ಲ. ಫೋನ್‌ಗಳ ವೈಜ್ಞಾನಿಕ ಪರೀಕ್ಷೆಯು ಇನ್ನೂ ಬಾಕಿಯಿದೆ ಮತ್ತು ಈ ಪರೀಕ್ಷೆಯು ವಂಚನೆ ಗ್ಯಾಂಗ್ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಬಹುದು ಎಂದು ಪೊಲೀಸರು ನಂಬಿದ್ದಾರೆ.

ನಿಜೋ ಮತ್ತು ಶಿಲ್ಪಾ ಕದಮಕ್ಕುಡಿಯ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ ಮಕ್ಕಳಿಬ್ಬರು ಬೆಡ್​ ಮೇಲೆ ಹೆಣವಾಗಿ ಬಿದ್ದಿದ್ದರು. ಇಬ್ಬರು ಗಂಡು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ದಂಪತಿ ನೇಣು ಬಿಗಿದುಕೊಂಡಿದ್ದಾರೆ. ನಿಜೋ ಕುಟುಂಬ ಮಹಡಿಯ ಮೇಲೆ ವಾಸವಿದ್ದರು. ಅವರ ತಾಯಿ, ಸಹೋದರ ಮತ್ತು ಕುಟುಂಬ ನೆಲಮಹಡಿಯಲ್ಲಿ ವಾಸವಿದ್ದರು. ಮಕ್ಕಳು ಕಾಣದಿದ್ದಾಗ ನಿಜೋ ಅವರ ತಾಯಿ ಬೆಳಗ್ಗೆ ಮೇಲಿನ ಮಹಡಿಗೆ ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿತು.

ನಿಜೋ ಒಬ್ಬ ಕಟ್ಟಡ ಕಾರ್ಮಿಕ ಮತ್ತು ಕಲಾವಿದ. ಮಕ್ಕಳು ವರಪುಳ ಇಸಾಬೆಲ್ಲಾ ಶಾಲೆಯಲ್ಲಿ ಓದುತ್ತಿದ್ದರು. ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಿಲ್ಪಾ ಕೆಲಸದ ನಿಮಿತ್ತ ಇಟಲಿಗೆ ಹೋಗಿದ್ದರು. ಆದರೆ, ಬಯಸಿದ ಕೆಲಸ ಸಿಗದೆ ಹಿಂತಿರುಗಬೇಕಾಯಿತು. ಹೆಚ್ಚುವರಿ ಆರ್ಥಿಕ ಹೊರೆ ಮತ್ತು ಲೋನ್​ ಗ್ಯಾಂಗ್​ ಕಿರುಕುಳದಿಂದ ಕುಟುಂಬವನ್ನು ದುಡುಕಿನ ಹೆಜ್ಜೆ ಇಡುವಂತೆ ಪ್ರೇರೇಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.