-->
1000938341
ಮಂಗಳೂರು ಬಳಿಕ ಬೆಂಗಳೂರಿನಲ್ಲೂ ಗಾಂಜಾ ಚಾಕಲೇಟ್ ಪತ್ತೆ- 3 ಕ್ವಿಂಟಾಲ್  ಚಾಕಲೇಟ್ ಜಪ್ತಿ

ಮಂಗಳೂರು ಬಳಿಕ ಬೆಂಗಳೂರಿನಲ್ಲೂ ಗಾಂಜಾ ಚಾಕಲೇಟ್ ಪತ್ತೆ- 3 ಕ್ವಿಂಟಾಲ್ ಚಾಕಲೇಟ್ ಜಪ್ತಿ


 ಬೆಂಗಳೂರು:ರಾಜಧಾನಿಯಲ್ಲಿ 'ಗಾಂಜಾ ಚಾಕೋಲೆಟ್' ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಸೀರೆ ವ್ಯಾಪಾರಿಯೊಬ್ಬನನ್ನು ಹಿಡಿದು ಮೂರು ಕ್ವಿಂಟಾಲ್ ಗಾಂಜಾ ವನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಜಪ್ತಿ ಮಾಡಿದ್ದಾರೆ.
 
 ಹಳೇಗುಡ್ಡಹಳ್ಳಿ ನಿವಾಸಿ ಶಮೀಮ್ ಅಖ್ತರ್‌ಬಂಧಿತನಾಗಿದ್ದು, ಆರೋಪಿಯಿಂದ 300 ಕೇಜಿ ಗಾಂಜಾ ಜಪ್ತಿ ಮಾಡಲಾಗಿದೆ. ಗಾಂಜಾ ಚಾಕೋಲೆಟ್ ಮಾರಾಟ ದಂಧೆಯಲ್ಲಿ ಅಖ್ತರ್ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಪಿ.ಸುರೇಶ್ ನೇತೃತ್ವದ ತಂಡವು, ತನ್ನ ಗ್ರಾಹಕರಿಗೆ ಪೂರೈಸಲು ಬುಧವಾರ ಸಂಜೆ ಆಟೋದಲ್ಲಿ ಗಾಂಜಾ ಸಾಗಿಸುವಾಗ ಅಖ್ತರ್ ನನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೀರೆ ವ್ಯಾಪಾರಕ್ಕೆ ಬಂದು ದಂಧೆ: ಉತ್ತರಪ್ರದೇಶ ರಾಜ್ಯದ ಕಾಶಿ ಮೂಲದ ಅ‌ಖ್ತರ್ ಕೆಲ ದಿನಗಳ ಹಿಂದೆ ಬನಾರಸ್ ಸೀರೆ ಮಾರಾಟದ ಸಲುವಾಗಿ ನಗರಕ್ಕೆ ಬಂದಿದ್ದ. ಹಳೇಗುಡ್ಡದಹಳ್ಳಿಯಲ್ಲಿ ನೆಲೆಸಿದ್ದ ಆತ, ಬೀದಿ ಬೀದಿ ತಿರುಗಿ ಸೀರೆ ಮಾರಾಟ ಮಾಡುತ್ತಿದ್ದ. ಆದರೆ ಸುಲಭವಾಗಿ ಹಣ ಸಂಪಾದನೆಗೆ ಅಗಲು ಗಾಂಜಾ ದಂಧೆ ಶುರು ಮಾಡಿದ್ದಾನೆ.

 ತನ್ನ ಸ್ನೇಹಿತನ ಮೂಲಕ ರೈಲಿನಲ್ಲಿ ಚಾಕೋಲೆಟ್ ಎಂದು ಹೇಳಿ ಗಾಂಜಾ ಮಿಶ್ರಿತ ಚಾಕೋಲೆಟ್ ತರಿಸಿಕೊಂಡು ನಗರದಲ್ಲಿ ಅ‌ದನ್ನು ಮಾರಾಟ ಮಾಡುತ್ತಿದ್ದ. ಈ ದಂಧೆ ಬಗ್ಗೆ ಆರ್‌ಎಂಸಿ ಯಾರ್ಡ್ ಠಾಣೆ ಇನ್‌ಸ್ಪೆಕ್ಟರ್ ಸುರೇಶ್ ಅವರಿಗೆ ಸುಳಿವು ಸಿಕ್ಕಿತು. ಪೊಲೀಸರು, ತನ್ನ ಮನೆಯಿಂದ ಆಟೋದಲ್ಲಿ ಬೇರೆಡೆಗೆ ಗಾಂಜಾ ಸಾಗಿಸಲು  ತೆರಳುವಾಗ ಬಲೆಗೆ ಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೂ 15ರಿಂದ ರೂ 20ಕ್ಕೆ ಚಾಕೋಲೆಟ್ ಮಾರಾಟ

ಗಾಂಜಾ ಮಿಶ್ರಿತ ಚಾಕೋಲೆಟ್ ಅನ್ನು ತಲಾ ಒಂದಕ್ಕೆ ರೂ 15 ರಿಂದ 20ಕ್ಕೆ ಅಖ್ತರ್ ಮಾರುತ್ತಿದ್ದ. ಕೆಲವು ಬಾರಿ ದುಬಾರಿ ಬೆಲೆಗೂ ಗಾಂಜಾ ಚಾಕೋಲೆಟ್ ಮಾರಾಟವಾಗುತ್ತಿದ್ದವು. ಬೇಡಿಕೆಗೆ ಅನುಗುಣವಾಗಿ ಚಾಕೋಲೆಟ್ ದರವನ್ನು ಅಖ್ತರ್ ನಿರ್ಧಾರ ಮಾಡುತ್ತಿದ್ದ. ಈ ದಂಧೆಯನ್ನು ಕಳೆದ ಹದಿನೈದು ದಿನಗಳಿಂದ ಆತ ನಡೆಸಿದ್ದು, ದೊಡ್ಡ ಮಟ್ಟದಲ್ಲಿ ಮಾರಾಟಕ್ಕೆ ಆತ ಸಜ್ಜಾಗಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಮಂಗಳೂರು, ಬೆಂಗೂರಿಗೆ ಒಬ್ಬರಿಂದಲೇ ಪೂರೈಕೆ?

ಇತ್ತೀಚೆಗೆ ಮಂಗಳೂರಿನಲ್ಲಿ ದೊಡ್ಡ ಪ್ರಮಾಣದ ಗಾಂಜಾ ಚಾಕೋಲೆಟ್‌ಗಳು ಪತ್ತೆಯಾಗಿದ್ದವು. ಈಗ ಬೆಂಗಳೂರಿನಲ್ಲಿ ಗಾಂಜಾ ಚಾಕೋಲೆಟ್‌ಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಉತ್ತರ ಪ್ರದೇಶ ಮೂಲದ ಒಂದೇ ಜಾಲವು ಅಕ್ರಮವಾಗಿ ಗಾಂಜಾ ಚಾಕೋಲೆಟ್ ಪೂರೈಸುತ್ತಿರುವುದು ಗೊತ್ತಾಗಿದೆ. ಉತ್ತರ ಪ್ರದೇಶದಲ್ಲೇ ಗಾಂಜಾ ಚಾಕೋಲೆಟ್‌ಗಳು ತಯಾರಿಸಿ ದೇಶದ ವಿವಿಧೆಡೆಗೆ ದಂಧೆಕೋರರು ಹಂಚಿಕೆ ಮಾಡುತ್ತಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article