ತಾಯಿಯನ್ನು ಹತ್ಯೆಗೈದು ಮೃತದೇಹವನ್ನು ಟ್ರ್ಯಾಲಿ ಸೂಟ್ ಕೇಸ್ ನಲ್ಲಿಟ್ಟು ಠಾಣೆಗೆ ತಂದ ಪುತ್ರಿ


ಬೆಂಗಳೂರು: ಹೆತ್ತತಾಯಿಯನ್ನೇ ಪುತ್ರಿಯೋರ್ವಳು ಕೊಲೆಗೈದು ಮೃತದೇಹವವನ್ನು ಸೂಟ್‌ಕೇಸ್‌ನಲ್ಲಿಟ್ಟು ಪೊಲೀಸ್ ಠಾಣೆಗೆ ಹೊತ್ತು ತಂದ ಆತಂಕಕಾರಿ ಘಟನೆಯೊಂದು ರಾಜ್ಯ ರಾಜಧಾನಿಯ ಮೈಕೊಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೀವಾ ಪಾಲ್ (70) ಪುತ್ರಿಯಿಂದಲೇ ಹತ್ಯೆಯಾದ ದುರ್ದೈವಿ. ಸೆನಾಲಿ ಸೇನ್ (39) ಹೆತ್ತತಾಯಿಯನ್ನೇ ಕೊಲೆಗೈದ ಪುತ್ರಿ.

ಆರೋಪಿ ಸೆನಾಲಿ ಸೇನ್ ಆಕೆಯ ತಾಯಿ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ಬಿಳೇಕಳ್ಳಿಯ ಎನ್‌ಎಸ್ಆರ್ ಗ್ರೀನ್ ಅಪಾರ್ಟ್‌ಮೆಂಟ್‌ ನಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು. ಆದೇ ಬೀವಾ ಪಾಲ್ ಹಾಗೂ ಸೆನಾಲಿ ಅತ್ತೆಯ ನಡುವೆ  ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಈ ಜಗಳದಿಂದ ಬೇಸತ್ತ ಬೀವಾ ಪಾಲ್, ನಿದ್ರೆ ಮಾತ್ರೆ ನುಂಗಿ ಸಾಯುವುದಾಗಿ ಹೇಳಿದ್ದರಂತೆ. ಅದರಂತೆ ಅವರು ಜೂ.12ರಂದು ಮುಂಜಾನೆ ಸೆನಾಲಿ ಸೇನ್ ತನ್ನ ತಾಯಿಗೆ 20 ನಿದ್ರೆಮಾತ್ರೆ ನುಂಗಿಸಿದ್ದಾಳೆ. ಆ ಬಳಿಕ ತಾಯಿ ಹೊಟ್ಟೆ ನೋವು ಎಂದು ಹೇಳಿದಾಗ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಇದಾದ ಬಳಿಕ ಟ್ರ್ಯಾಲಿ ಸೂಟ್ ಕೇಸ್‌ನಲ್ಲಿ ತಾಯಿಯ ಮೃತದೇಹವನ್ನು ಮತ್ತು ತಂದೆಯ ಫೋಟೋ ಇಟ್ಟುಕೊಂಡು ಸ್ಟೇಷನ್‌ಗೆ ಹೊತ್ತು ತಂದಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ತಾಯಿಯ ಹತ್ಯೆ ಮಾಡಿರುವುದಾಗಿ ಶರಣಾಗಿದ್ದಾಳೆ. ಸೆನಾಲಿ ಸೇನ್ ಕೃತ್ಯ ಕಂಡು ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೆನಾಲಿ ಸೇನ್‌ಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.