ಮಂಗಳೂರು: ಮದುವೆಯಾದ ಆರೇ ತಿಂಗಳಿಗೆ ಮೂರು 'ತಲಾಖ್' ಹೇಳಿದ ಪಾಪಿ ಪತಿ: ಠಾಣೆಯ ಮೆಟ್ಟಿಲೇರಿದ ಪತ್ನಿ


ಮಂಗಳೂರು: ದೇಶದಲ್ಲಿ ತ್ರಿವಳಿ ತಲಾಖ್ ನೀಡುವುದಕ್ಕೆ ನಿಷೇಧವಿದೆ. ಆದರೆ ಮಂಗಳೂರಿನಲ್ಲಿ ಮದುವೆಯಾದ ಆರೇ ತಿಂಗಳಿಗೆ ಪಾಪಿ ಪತಿಯೊಬ್ಬ ಪತ್ನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ತ್ರಿವಳಿ ತಲಾಖ್ ಹೇಳಿ ಮನೆಯಿಂದ ಹೊರದಬ್ಬಿದ ಅಮಾನವೀಯ ಘಟನೆ ನಡೆದಿದೆ.

ನಗರದ ಮಂಗಳಾದೇವಿ ಸಮೀಪದ ಮಾರ್ನಮಿಕಟ್ಟೆ ನಿವಾಸಿ ಮಹಮ್ಮದ್ ಹುಸೇನ್ ಪತ್ನಿಯನ್ನು ಹಿಂಸಿಸಿ ತಲಾಖ್ ನೀಡಿ ಪಾಪಿ ಪತಿ. ತರಕಾರಿ ವ್ಯಾಪಾರಿಯಾದ ಈತನಿಗೆ ಮೊದಲೊಂದು ಮದುವೆಯಾಗಿ ಎರಡು ಮಕ್ಕಳಿತ್ತು. ಸಂತ್ರಸ್ತೆ ಶಬಾನಾಗೂ ಮೊದಲೊಂದು ಮದುವೆಯಾಗಿ ಎರಡು ಮಕ್ಕಳಿತ್ತು.‌ ಮೊದಲ ಪತಿಯಿಂದ ಬೇರೆಯಾಗಿದ್ದ ಈಕೆಯನ್ನು ಆರು ತಿಂಗಳ ಹಿಂದಷ್ಟೇ ಹುಸೇನ್ ವಿವಾಹವಾಗಿದ್ದ. ಮದುವೆಯಾದ ಎರಡು ತಿಂಗಳುಗಳ ಕಾಲ ಚೆನ್ನಾಗಿಯೇ ಸಂಸಾರ ನಡೆದಿತ್ತು. ಆ ಬಳಿಕ ಈತನ ಅಸಲಿ ಮುಖ ಬಯಲಾಗತೊಡಗಿದೆ. ಮದುವೆಯಾದ ಕೇವಲ ಎಂಟೇ ದಿನಗಳಲ್ಲಿ ಪತ್ನಿಯೊಂದಿಗೆ ನಯವಾಗಿ ಮಾತನಾಡಿ ತಾನು ಸಾಲದಲ್ಲಿದ್ದೇನೆಂದು ಹೇಳಿ ಪತ್ನಿಯ ಚಿನ್ನಾಭರಣ ಸೇರಿ 10 ಲಕ್ಷ ರೂ.ವನ್ನು ಪೀಕಿಸಿದ್ದಾನೆ.

ಕೇವಲ ಹಣ ಒಡವೆಗಾಗಿ ಮದುವೆಯಾಗಿದ್ದ ಹುಸೇನ್ ಪತ್ನಿಯನ್ನು ತವರು ಮನೆಯಲ್ಲೇ ಇರಿಸಿದ್ದನು. ಅಲ್ಲದೆ ಗರ್ಭಿಣಿಯಾಗಿದ್ದ ಆಕೆಯನ್ನು ಬಲವಂತವಾಗಿ ಮಾತ್ರೆ ತಿನ್ನಿಸಿ ಅಬಾರ್ಶನ್ ಮಾಡಿಸಿದ್ದನು. ಪತಿ ಮನೆಗೆ ಬಂದಿದ್ದ ವೇಳೆ ಮನಬಂದಂತೆ ಥಳಿಸಿದ ಹುಸೇನ್ ಜುಟ್ಟು ಹಿಡಿದು ಮೂರು ಬಾರಿ ತಲಾಖ್ ಹೇಳಿ ದಾಂಪತ್ಯ ಸಂಬಂಧಕ್ಕೆ ತಿಲಾಂಜಲಿ ಬಿಟ್ಟಿದ್ದ. ಹಲ್ಲೆಯಿಂದ ಗಾಯಗೊಂಡಿದ್ದ ಶಬಾನಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮೊದಲ ಪತ್ನಿಗೂ ತಲಾಖ್ ಹೇಳಿ ಸಂಬಂಧ ಕಡಿದುಕೊಂಡಿದ್ದ ಹುಸೇನ್ ಇದೀಗ ಎರಡನೇ ಪತ್ನಿಗೂ ತಲಾಖ್ ಹೇಳಿದ್ದಾನೆ. ಪರಿಣಾಮ ಶಬಾನಾ ನ್ಯಾಯಕ್ಕಾಗಿ ಪಾಂಡೇಶ್ವರ ಠಾಣೆಯ ಮೆಟ್ಟಿಲೇರಿದ್ದಾಳೆ. ಅಲ್ಲದೆ ತನಗಾದ ಅನ್ಯಾಯ ಮತ್ತೊಬ್ಬ ಹೆಣ್ಣಿಗೆ ಆಗಬಾರದೆಂದು ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿದ್ದಾಳೆ. ಒಟ್ಟಿನಲ್ಲಿ ಪಾಪಿ ಮಹಮ್ಮದ್ ಹುಸೇನ್ ನಂತಹ ಅಮಾನವೀಯ ಪತಿಗೆ ಕಾನೂನುರೀತ್ಯಾ ಶಿಕ್ಷೆ ಆಗಲಿದೆಯೇ ಎಂಬುದು ಕಾದು ನೋಡಬೇಕಿದೆ.



BREAKING NEWS
Loading latest news...
Join our WhatsApp Channel Powered By : Online Pudu