ಅಕ್ರಮ ಸಂಬಂಧದ ಶಂಕೆ : ಪತ್ನಿಯ ಸಹೋದ್ಯೋಗಿಯನ್ನೇ ಹತ್ಯೆ ಮಾಡಿದ ಪತಿ



ನವದೆಹಲಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಶಂಕೆಯಲ್ಲಿ ಪತಿ, ಪತ್ನಿಯ ಸಹೋದ್ಯೋಗಿಯನ್ನೇ ಹತ್ಯೆ ಮಾಡಿರುವ ಘಟನೆ ಆಗ್ನೇಯ ದೆಹಲಿಯ ಗೋವಿಂದಪುರಿಯಲ್ಲಿ ನಡೆದಿದೆ.

ವೀರೆಂದರ್ (35) ಮೃತಪಟ್ಟ ದುರ್ದೈವಿ. ಸೋನು(33) ಅಲಿಯಾಸ್ ಧಾರ್‌ ಕೊಲೆ ಆರೋಪಿ. ಇದೀಗ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಮೃತ ದುರ್ದೈವಿ ವೀರೇಂದರ್ ಹಾಗೂ ಆರೋಪಿಯ ಪತ್ನಿ ಒಂದೇ ಶಾಲೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದರು. ವೀರೇಂದರ್ ಶಾಲೆತ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಆರೋಪಿಯ ಪತ್ನಿ ಆಫೀಸ್ ಸ್ಟಾಫ್ ಆಗಿ ಕೆಲಸ ಮಾಡುತ್ತಿದ್ದರು. ಇವಬ್ಬರ ನಡುವಿನ ಸ್ನೇಹವನ್ನು ಅಪಾರ್ಥ ಮಾಡಿಕೊಂಡ ಆರೋಪಿ ಸೋನು ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ವೀರೇಂದರ್‌ನನ್ನು ಥಳಿಸಿ ಚಾಕುವಿನಿಂದ ಹಲವು ಭಾರಿ ಇರಿದು ಪರಾರಿಯಾಗಿದ್ದಾನೆ. ತಮ್ಮ ಸಹೋದರ ರಕ್ತಸ್ರಾವದಿಂದ ನರಳುತ್ತಿದ್ದನ್ನು ಗಮನಿಸಿದ ವೀರೆಂದರ್ ಸಹೋದರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಅಧಿಕಾರಿಗಳು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ದುರ್ದೈವಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಆರೋಪಿಯನ್ನು ದೆಹಲಿಯ ಜುಗೀಸ್ ಪ್ರದೇಶದ ನವಜೀವನ ಕ್ಯಾಂಪ್‌ನಲ್ಲಿ ಬಂಧಿಸಿರುವ ಪೊಲೀಸರು ಕೊಲೆಗೆ ಬಳಸಿದ ಚಾಕು ಹಾಗು ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.