ಜನನಿಬಿಡ ಪ್ರದೇಶದಲ್ಲಿಯೇ ತಾಯಿಯ ಮುಂಭಾಗ ಪುತ್ರಿಗೆ ಲೈಂಗಿಕ ಕಿರುಕುಳ: ಕಾಮುಕ ಯುವಕ ಅಂದರ್
Friday, April 14, 2023
ತಿರುವನಂತಪುರಂ: ಬೈಕ್ ನಲ್ಲಿ ಬಂದ ಅಸಾಮಿಯೋರ್ವನು ಜನನಿಬಿಡ ಪ್ರದೇಶದಲ್ಲಿ ತಾಯಿಯ ಮುಂಭಾಗವೇ ಪುತ್ರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನುಷ ಘಟನೆಯೊಂದು ಕೇರಳದ ತಿರುವನಂತಪುರದಲ್ಲಿ ನಡೆದಿದೆ. ಕಾರ್ಯಾಚರಣೆ ನಡೆಸಿರುವ ಆರೋಪಿಯನ್ನು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಶಿಹಾಬುದ್ದೀನ್ (27) ಬಂಧಿತ ಆರೋಪಿ. ಕೊಲ್ಲಂ ಮೂಲದ ಯುವತಿಯ ಮೇಲೆ ಕಾಮುಕ ಶಿಹಾಬುದ್ದೀನ್, ಅಟ್ಟಕುಲಂಗರ ಎಂಬಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸೋಮವಾರ ಬಟ್ಟೆ ಖರೀದಿಸಲೆಂದು ಸಂತ್ರಸ್ತ ಯುವತಿ ತಾಯಿಯೊಂದಿಗೆ ನಗರಕ್ಕೆ ಬಂದಿದ್ದಳು. ಈ ವೇಳೆ ಅಟ್ಟಕುಲಂಗರದಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ಆರೋಪಿ, ನಡುರಸ್ತೆಯಲ್ಲಿಯೇ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಘಟನೆ ನಡೆದ ತಕ್ಷಣ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸಿಸಿಟಿವಿಯ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ಫೋರ್ಟ್ ಪೊಲೀಸರು ಘಟನೆ ನಡೆದ ಒಂದು ದಿನದ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಛಲೈನಲ್ಲಿರುವ ಆತನ ನಿವಾಸದಲ್ಲಿಯೇ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿ ಶಿಹಾಬುದ್ದೀನ್ ಚಿನ್ನಾಭರಣ ವ್ಯಾಪಾರಿಯಾಗಿದ್ದಾನೆ. ಸಂತ್ರಸ್ತೆ ಆರೋಪಿಯನ್ನು ಗುರುತಿಸಿದ್ದಾಳೆಂದು ತಿಳಿದುಬಂದಿದೆ.