ಮಂಗಳೂರು: ಖಾಸಗಿ ಬಸ್ ಡಿಕ್ಕಿಯಾಗಿ 7ವರ್ಷದ ಬಾಲಕ ಸಾವು - ತಾಯಿ ಗಂಭೀರ



ಮಂಗಳೂರು: ದ್ವಿಚಕ್ರ ವಾಹನಕ್ಕೆ‌ ಢಿಕ್ಕಿ ಹೊಡೆದ ಖಾಸಗಿ ಬಸ್ಸೊಂದು ರಸ್ತೆಗೆ ಬಿದ್ದ 7ವರ್ಷದ ಬಾಲಕನ ಮೇಲೆಯೇ ಹರಿದ ಪರಿಣಾಮ ಬಾಲಕ ದುರ್ಮರಣಕ್ಕೀಡಾಗಿ ಆತನ ತಾಯಿ ಗಂಭೀರವಾಗಿ ಗಾಯಗೊಂಡ‌ ದಾರುಣ ಘಟನೆ ನಗರದ ಬೆಂದೂರುವೆಲ್ ನಲ್ಲಿ ಶುಕ್ರವಾರ ನಡೆದಿದೆ.

ಹಾರ್ದಿಕ್(7) ಮೃತಪಟ್ಟ ಬಾಲಕ ಹಾಗೂ ಗಾಯಾಳುವನ್ನು ಬಾಲಕನ ತಾಯಿ ಸ್ವಾತಿ ಎಂದು ಗುರುತಿಸಲಾಗಿದೆ.

ಸ್ವಾತಿಯವರು ತಮ್ಮ ಪುತ್ರ ಹಾರ್ದಿಕ್ ನೊಂದಿಗೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಖಾಸಗಿ ಬಸ್ಸೊಂದು ನಿರ್ಲಕ್ಷ್ಯದಿಂದ ಸಂಚರಿಸಿಕೊಂಡು ಬಂದು ಸ್ಕೂಟರ್ ಹ್ಯಾಂಡಲ್ ಢಿಕ್ಕಿಯಾಗಿದೆ. ಪರಿಣಾಮ ಸ್ಕೂಟರ್ ರಸ್ತೆಗೆ ಬಿದ್ದಿದ್ದು, ಸ್ಕೂಟರ್ ನಲ್ಲಿದ್ದ ತಾಯಿ - ಮಗ ರಸ್ತೆಗೆಸೆಯಲ್ಪಟ್ಟಿದ್ದಾರೆ‌. ಈ ವೇಳೆ ಬಸ್ ಬಾಲಕ ಹಾರ್ದಿಕ್ ಮೇಲೆಯೇ ಹರಿದು ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಅಪಘಾತದಲ್ಲಿ ತಾಯಿ ಸ್ವಾತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಓವರ್‌ಟೇಕ್‌ ಮಾಡುವ ಭರದಲ್ಲಿ ಸ್ಕೂಟರ್ ಡಿಕ್ಕಿಗೆ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಮೃತ ಬಾಲಕ ಹಾರ್ದಿಕ್ ನಗರದ ಆಟೊಮೊಬೈಲ್ ಮಳಿಗೆಯೊಂದರ ಮಾಲಕರ ಪುತ್ರ ಎಂದು ತಿಳಿದು ಬಂದಿದೆ.