-->

ಟೆಕ್ಕಿ ಆತ್ಮಹತ್ಯೆ ಪ್ರಕರಣ: ಐದು ತಿಂಗಳ ಬಳಿಕ ಪ್ರಿಯಕರ ಅರೆಸ್ಟ್

ಟೆಕ್ಕಿ ಆತ್ಮಹತ್ಯೆ ಪ್ರಕರಣ: ಐದು ತಿಂಗಳ ಬಳಿಕ ಪ್ರಿಯಕರ ಅರೆಸ್ಟ್



ಭುವನೇಶ್ವರ್: ಒಡಿಶಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತಾ ಉತ್ಕಲ್ ಕುಮಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ತಿಂಗಳ ಬಳಿಕ ಆಕೆಯ ಪ್ರಿಯಕರ ಸೌಮ್ಯಜಿತ್ ಮೊಹಪಾತ್ರನನ್ನು ಫೆ.16ರಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.

ಶ್ವೇತಾ ಉತ್ಕಲ್ ಕುಮಾರಿ ಬರೆದಿದ್ದ ಡೆತ್ ನೋಟ್ ಆಧರಿಸಿ ಪ್ರಿಯಕರ ಸೌಮ್ಯಜಿತ್‌ನನ್ನು ಭುವನೇಶ್ವರದ ಚಂದ್ರಶೇಖರಪುರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.  ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ತಿರಸ್ಕರಿಸಿದ ಬಳಿಕ ಫೆ.16ರಂದು ಬೆಳಂಬೆಳಗ್ಗೆ 4.30ರ ಸುಮಾರಿಗೆ ಸಂಬಲ್ಪುರ್ ನ ಬನ್ನಿಧಾರ್ ನಗರದಲ್ಲಿರುವ ಆತನ ನಿವಾಸದಲ್ಲಿ ಸೌಮ್ಯಜಿತ್‌ನನ್ನು ಬಂಧಿಸಲಾಗಿದೆ. ಇದೀಗ ಪ್ರಕರಣವನ್ನು ಭುವನೇಶ್ವರ್‌ಗೆ ವರ್ಗಾಯಿಸಲಾಗುತ್ತಿದೆ.

ಭದ್ರಕ್ ಜಿಲ್ಲೆಯ ನಿವಾಸಿ ಶ್ವೇತಾ, ಭುವನೇಶ್ವರದ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಭುವನೇಶ್ವರದ ಇನ್ಫೋಸಿಟಿ ಪ್ರದೇಶದ ಗಾರ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಳು. ಕಳೆದ ವರ್ಷ 2022ರ ಆ.19ರಂದು ರಾತ್ರಿ ಶ್ವೇತಾಳ ಕುಟುಂಬಸ್ಥರು ಆಕೆಯನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿತ್ತು. ಆದರೆ ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಆಕೆಯ ಪಾಲಕರು ಚಂದ್ರಶೇಖರ್‌ಪುರ ಪೊಲೀಸರ ಸಹಾಯವನ್ನು ಕೋರಿದರು.

ಶ್ವೇತಾಳ ಮಾಹಿತಿಯನ್ನು ಪಡೆದು ಆಕೆ ನೆಲೆಸಿದ್ದ ಅಪಾರ್ಟ್‌ಮೆಂಟ್ ನ ಫ್ಲ್ಯಾಟ್‌ಗೆ ತೆರಳಿ, ಒಳಗಡೆಯಿಂದ ಲಾಕ್ ಆಗಿದ್ದ ಬಾಗಿಲನ್ನು ಮುರಿದು ಒಳಗಡೆ ಪ್ರವೇಶಿಸಿದಾಗ ಶ್ವೇತಾಳ ಮೃತದೇಹ ಸೀಲಿಂಗ್ ಫ್ಯಾನ್‌ನಲ್ಲಿ ನೇತಾಡುತ್ತಿತ್ತು. ಆ ಬಳಿಕ ಸೌಮ್ಯಜಿತ್ ಮೊಹಪಾತ್ರ ವಿರುದ್ಧ ಶ್ವೇತಾ ಕುಟುಂಬ ದೂರು ದಾಖಲಿಸಿತ್ತು. ಶ್ವೇತಾ ಜೊತೆಗಿನ ತನ್ನ ಸಂಬಂಧವನ್ನು ಕಡಿದುಕೊಂಡ ಬಳಿಕ ಆಕೆಯ ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆಂದು ಆತ ಬೆದರಿಕೆಯೊಡ್ಡಿದ್ದ. ಅದಕ್ಕೆ ಹೆದರಿ, ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬ ದೂರಿನಲ್ಲಿ ಉಲ್ಲೇಖಿಸಿತ್ತು.

ಫ್ಲ್ಯಾಟ್‌ನಲ್ಲಿ ದೊರೆತ ಶ್ವೇತಾಳ ಮೊಬೈಲ್ ಮತ್ತು ಡೈರಿಯಿಂದ ಸೌಮ್ಯಜಿತ್ ಜೊತೆಗಿನ ಸಂಬಂಧದ ಬಗ್ಗೆ ಪೊಲೀಸರಿಗೆ ತಿಳಿದು ಬಂದಿದೆ. ಸಾವಿಗೂ ಮುನ್ನ ಶ್ವೇತಾ 15 ಬಾರಿ ಸೌಮ್ಯಜಿತ್‌ಗೆ ಕರೆ ಮಾಡಿದ್ದಾಳೆ. ಆದರೆ, ಆತ ಕರೆ ಸ್ವೀಕರಿಸಿಲ್ಲ. ಇಬ್ಬರ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ತುಣುಕು ಸಹ ತದನಂತರದಲ್ಲಿ ಬೆಳಕಿಗೆ ಬಂದಿದೆ. ನನ್ನ ಜೀವನದಿಂದ ಆಚೆ ಹೋಗುವಂತೆ ಸೌಮ್ಯಜಿತ್ ಕೇಳಿರುವುದು ಆಡಿಯೋದಲ್ಲಿದೆ. ಇನ್ನು ಇಬ್ಬರ ಮದುವೆಗೆ ಮಾತುಕತೆಯು ನಡೆದಿತ್ತಂತೆ. ಸೌಮ್ಯಜಿತ್ ಕುಟುಂಬದ ಜೊತೆ ಮದುವೆ ಬಗ್ಗೆ ಮಾತನಾಡಿದಾಗ ಸೌಮ್ಯಜಿತ್ ತಾಯಿ 30 ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದರು ಎಂದು ಶ್ವೇತಾಳ ಕುಟುಂಬ ಆರೋಪ ಮಾಡಿದೆ.

Ads on article

Advertise in articles 1

advertising articles 2

Advertise under the article