ಶಾಲೆಯಲ್ಲಿಯೇ ಹೃದಯಾಘಾತಕ್ಕೀಡಾಗಿ ಮೃತಪಟ್ಟ ವಿದ್ಯಾರ್ಥಿನಿ


ಇಂದೋರ್: ಇತ್ತೀಚೆಗೆ ಸಣ್ಣವಯಸ್ಸಿನವರೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಶಾಲೆಗೆ ಹೋಗುವ ಸಣ್ಣಪುಟ್ಟ ಮಕ್ಕಳು ಬಲಿಯಾಗುತ್ತಿದ್ದಾರೆ‌. ಇದೀಗ ಆ ಪಟ್ಟಿಗೆ ಹದಿಹರೆಯದ ವಿದ್ಯಾರ್ಥಿನಿಯೊಬ್ಬಳೂ ಸೇರಿದ್ದಾಳೆ. ಶಾಲೆಗೆ ತೆರಳಿರುವ ಆಕೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ.

ಮಧ್ಯಪ್ರದೇಶದ ಇಂದೋರ್‌ನ ಉಷಾನಗರದಲ್ಲಿರುವ ಶಾಲೆಯೊಂದರಲ್ಲಿ ಈ ಪ್ರಕರಣ ನಡೆದಿದೆ. ಪಿಯುಸಿ ವ್ಯಾಸಂಗ ಮಾಡುತ್ತಿರುವ ವೃಂದಾ ತ್ರಿಪಾಠಿ (16) ಸಾವಿಗೀಡಾದ ವಿದ್ಯಾರ್ಥಿನಿ. ಗಣರಾಜ್ಯೋತ್ಸವದ ಕಾರ್ಯಕ್ರಮದ ರಿಹರ್ಸಲ್‌ಗೆಂದು ಈಕೆ ಶಾಲೆಗೆ ಬಂದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಬುಧವಾರ ರಿಹರ್ಸಲ್‌ಗೆಂದು ಹೋಗಿದ್ದ ಆಕೆ ಅಲ್ಲೇ ಕುಸಿದು ಬಿದ್ದಿದ್ದಳು. ಅಸ್ವಸ್ಥಗೊಂಡ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ. ವಿದ್ಯಾರ್ಥಿನಿ ಕೋಲ್ಡ್ ವೇವ್‌ನಿಂದಾಗಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.