ಆರ್‌ಆರ್‌ಆರ್ ಸಿನಿಮಾದ 'ನಾಟು ನಾಟು' ಹಾಡಿಗೆ “ಗೋಲ್ಡನ್ ಗ್ಲೋಬ್-2023" ಪ್ರಶಸ್ತಿಯ ಗರಿ


ನವದೆಹಲಿ: ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ಅಭಿನಯದ “ಆರ್‌ಆರ್‌ಆರ್” ಸಿನಿಮಾ ಇದೀಗ ಐತಿಹಾಸಿಕ ಸಾಧನೆ ಮಾಡಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ನಾಟು ಹಾಡಿಗೆ “ಗೋಲ್ಡನ್ ಗ್ಲೋಬ್-2023" ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿ ಮುಡಿಗೇರಿದೆ.

ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸದ್ದು ಮಾಡಿತು. ಈ ಹಾಡಿನ ಜೂ. ಎನ್‌ಟಿಆರ್ ಮತ್ತು ರಾಮ್‌ಚರಣ್ ನೃತ್ಯಕ್ಕೆ ಎಲ್ಲರೂ ಫಿದಾ ಆಗಿದ್ದರು. ಇದೀಗ ಸಿನಿಮಾ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದ್ದು, ಹಾಲಿವುಡ್‌ನ ಅತಿದೊಡ್ಡ ಪ್ರಶಸ್ತಿಗಳಲ್ಲಿ ಒಂದಾದ ಗೋಲ್ಡನ್ ಗ್ಲೋಬ್ ಗೌರವಕ್ಕೆ ಆರ್‌ಆರ್‌ಆರ್ ಸಿನಿಮಾ ಪಾತ್ರವಾಗಿದೆ.


ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ವೇರ್ ದಿ ಕ್ರಾಡಾಡ್ಸ್ ಸಿಂಗ್‌ನಿಂದ ಟೇಲರ್ ಸ್ವಿಫ್ಟ್‌ನ ಕ್ಯಾರೊಲಿನಾ, ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೊದಿಂದ ಸಿಯೊ ಪಾಪಾ, ಟಾಪ್ ಗನ್‌ನಿಂದ ಲೇಡಿ ಗಾಗಾಸ್ ಹೋಲ್ಡ್ ಮೈ ಹ್ಯಾಂಡ್: ಮೇವರಿಕ್ ಮತ್ತು ಲಿಫ್ಟ್ ಮಿ ಅಪ್ ಫ್ರಮ್ ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್ ನಾಮನಿರ್ದೇಶನಗೊಂಡಿದ್ದವು. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ಆರ್‌ಆರ್‌ಆರ್, ಗೋಲ್ಡನ್ ಗ್ಲೋಬ್‌ನಲ್ಲಿ ಎರಡನೇ ವಿಭಾಗದಲ್ಲಿಯೂ ಸ್ಪರ್ಧಿಸುತ್ತಿದೆ. ಅತ್ಯುತ್ತಮ ಇಂಗ್ಲಿಷ್‌ಯೇತರ ಭಾಷಾ ಚಲನಚಿತ್ರ ವಿಭಾಗದಲ್ಲಿಯೂ ಸ್ಪರ್ಧಿಸಿದೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಸಿನಿಮಾದ ನಿರ್ದೇಶಕ ಎಸ್.ಎಸ್. ರಾಜಮೌಳಿ, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರು ತಮ್ಮ ಪತ್ನಿ ಉಪಾಸನಾ ಕಾಮಿನೇನಿ ಅವರೊಂದಿಗೆ ಭಾಗವಹಿಸಿದ್ದರು.