ತಂದೆ ಹೃದಯಾಘಾತದಿಂದ ಸಾವು: ಸುದ್ದಿ ತಿಳಿದು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ 11ರ ಪುತ್ರಿ
Sunday, January 22, 2023
ಮದ್ಯಪ್ರದೇಶ: ದೇಶದಲ್ಲಿ ಇತ್ತೀಚೆಗೆ ಹೃದಯಾಘಾತಕ್ಕೊಳಗಾಗಿ, ಕುಸಿದು ಬಿದ್ದು ಮರಣ ಹೊಂದುವವರ ಪ್ರಮಾಣ ಅಧಿಕವಾಗುತ್ತಿದೆ. ಅಂಥಹದ್ದೇ ಮತ್ತೊಂದು ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ. ಆದರೆ ಇಲ್ಲಿ ತಂದೆ ಹೃದಯಾಘಾತದಿಂದ ಸಾವಿಗೀಡಾದ್ದರು. ಈ ಸುದ್ದಿ ತಿಳಿದು ಪುತ್ರಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.
ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಬರ್ಖೇಡ ಜಾಗಿರ್ ಎಂಬ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ಶುಕ್ರವಾರ ಬೆಳಗ್ಗೆ ತೀವ್ರತರವಾದ ಎದೆನೋವಿಗೆ ತುತ್ತಾಗಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದರು.
ಆಸ್ಪತ್ರೆಯಲ್ಲಿದ್ದವರು ಮೊಬೈಲ್ ಫೋನ್ ಮೂಲಕ ಕರೆ ಮಾಡಿ ಕುಟುಂಬಸ್ಥರಿಗೆ ಈ ವಿಚಾರ ತಿಳಿಸಿದ್ದಾರೆ. ಆಗ ತಂದೆಯ ಸಾವಿನ ಸುದ್ದಿಯನ್ನು ಕೇಳಿದ ಅವರ 11 ವರ್ಷದ ಪುತ್ರಿ ಹೊರಗೆ ಹೋದವಳು ಮತ್ತೆ ಮರಳಿ ಬರಲಿಲ್ಲ. ಎಲ್ಲಿ ಹೋಗಿದ್ದಾಳೆಂದು ಮನೆಯರೆಲ್ಲಾ ಹುಡುಕಾಟ ನಡೆಸಿದರೂ ಆಕೆಯ ಪತ್ತೆಯಿಲ್ಲ. ಆದ್ದರಿಂದ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದಾಗ ಆಕೆಯ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.