ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಗುರುವಾರ ರಾಷ್ಟ್ರೀಯ ತನಿಖಾ ದಳ ( ಎನ್‌ಐಎ ) ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಆರೋಪಿಗಳಾದ ನೌಫಲ್ ( 28 ) ಸೈನುಲ್ ಆಬಿದ್ (22), ಮೊಹಮ್ಮದ್ ಸೈಯದ್ ( 32 ), ಅಬ್ದುಲ್ ಬಶೀರ್ ( 29 ) ಮತ್ತು ರಿಯಾಜ್ ( 27 ) ಅವರನ್ನು ಎನ್‌ಐಎ ಆರು ದಿನಗಳ ಕಾಲ ( ಆ . 23 ರ ವರೆಗೆ ) ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ. ಜುಲೈ 27 ರಂದು ಆರೋಪಿಗಳು ಬಿಜೆಪಿ ಯುವ ಮುಖಂಡ ಪ್ರವೀಣ್ ಅವರನ್ನು ರಸ್ತೆಯಲ್ಲಿ ಭೀಕರವಾಗಿ ಹತ್ಯೆಗೈದಿದ್ದರು. ಈ ಪ್ರಕರಣ ಸಂಬಂಧ ಕಾನೂನು ಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳ್ಳಾರೆ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿರುವ ಎನ್‌ಐಎ ಅಧಿಕಾರಿಗಳು ಗುರುವಾರ ಐವರು ಆರೋಪಿಗಳನ್ನು ಆರು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಐವರು ಆರೋಪಿಗಳು ಮಂಗಳೂರು ಜೈಲಿನಲ್ಲಿದ್ದು, ಅಲ್ಲಿಂದಲೇ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.