ಮಂಗಳೂರು: ಇತ್ತೀಚಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರಸ್ತೆ ಹೊಂಡಕ್ಕೆ ಬಲಿಯಾಗಿರುವ ಬಳಿಕ ಆತನ ಸ್ನೇಹಿತ ತನ್ನ ಏಕಾಂಗಿ ಹೋರಾಟದಿಂದ ಜನಪ್ರತಿನಿಧಿಗಳ, ಅಧಿಕಾರಿಗಳ ನಿದ್ದೆಗೆಡಿಸಿದ್ದ. ಆ ಬಳಿಕ ನಿದ್ದೆ ಕೊಡವಿ ಎಚ್ಚೆತ್ತ ಅಧಿಕಾರಿಗಳು ಅಲ್ಲಲ್ಲಿ ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಆದರೂ ಇನ್ನೂ ಸಾಕಷ್ಟು ರಸ್ತೆ ಹೊಂಡಗಳು ಬಾಯ್ದೆರೆದು ನಿಂತಿವೆ.
ಇದೀಗ ಪುಟ್ಟ ವೀಡಿಯೊಂದು ರಸ್ತೆ ಹೊಂಡಕ್ಕೇ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಪುಟ್ಟ ಬಾಲಕನೋರ್ವನು ತನ್ನ ಪುಟ್ಟ ಪುಟ್ಟ ಕೈಗಳಿಂದ ಒಂದೊಂದೇ ಕಲ್ಲುಗಳನ್ನು ಆಯ್ದು ತಂದು ರಸ್ತೆ ಹೊಂಡವನ್ನು ಮುಚ್ಚುತ್ತಿರುವುದು ಜನಪ್ರತಿನಿಧಿಗಳು, ಅಧಿಕಾರಿಗಳು ತಲೆತಗ್ಗಿಸುವಂತೆ ಮಾಡಿದೆ.
ನಗರದ ಕಂಕನಾಡಿ ಹೂವಿನ ಮಾರುಕಟ್ಟೆ ಬಳಿಯ ಕಾಂಕ್ರಿಟ್ ರಸ್ತೆಯಂಚಿನಲ್ಲಿನ ಹೊಂಡವಾಗಿತ್ತು ಪದೇ ಪದೇ ಇಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದರೆ, ಪಾದಚಾರಿಗಳ ಹೊಂಡ ಗಮನಿಸಿದೆ ಎಡವಿ ಬೀಳುತ್ತಿದ್ದರು. ಇದನ್ನು ದಿನನಿತ್ಯ ಗಮನಿಸುತ್ತಿದ್ದ ಈ ಬಾಲಕ ಹೊಂಡವನ್ನು ಮುಚ್ಚುವ ಪ್ರಯತ್ನ ಮಾಡಿದ್ದಾನೆ. ತನ್ನ ಮಣಭಾರದ ಪುಸ್ತಕಗಳಿರುವ ಬ್ಯಾಗ್ ಅನ್ನು ಹೊತ್ತುಕೊಂಡೇ ಕಲ್ಲುಗಳನ್ನು ಹೆಕ್ಕಿ ಹಾಕಿ ಹೊಂಡ ಮುಚ್ಚುವ ಕಾರ್ಯ ಮಾಡಿದ್ದಾನೆ. ಅಂದ ಹಾಗೆ ಈ ಬಾಲಕನ ಹೆಸರು ಮುಹಮ್ಮದ್ ಅರ್‌ಹಾಮ್. ಈತ ಎಕ್ಕೂರು ಕೇಂದ್ರೀಯ ವಿದ್ಯಾಲಯ-2ರ
ಏಳನೇ ತರಗತಿ ವಿದ್ಯಾರ್ಥಿ. ಇದೀಗ ಈತನ ಕಾರ್ಯಕ್ಕೆ ಎಲ್ಲರೂ ಶಹಬ್ಬಾಸ್ ಅಂದದ್ದಂತೂ ಸತ್ಯ.
I