-->

ಹೆಣ್ಣು ಮಗುವೆಂದು ನನ್ನನ್ನು ತಂದೆ ತೊರೆದು ಹೋದರು... ಪಿಎಸ್ಐ ಹಗರಣದಲ್ಲಿ ಸಿಕ್ಕಿಬಿದ್ದ ಪ್ರಥಮ ಸ್ಥಾನ ಪಡೆದ ರಚನಾ ನೋವಿನ ಕಥೆ

ಹೆಣ್ಣು ಮಗುವೆಂದು ನನ್ನನ್ನು ತಂದೆ ತೊರೆದು ಹೋದರು... ಪಿಎಸ್ಐ ಹಗರಣದಲ್ಲಿ ಸಿಕ್ಕಿಬಿದ್ದ ಪ್ರಥಮ ಸ್ಥಾನ ಪಡೆದ ರಚನಾ ನೋವಿನ ಕಥೆ

ಬೆಂಗಳೂರು: ಪಿಎಸ್‌ಐ ಹಗರಣದಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಮಾಡಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ರಚನಾ ಹನುಮಂತ ( 25  ಇತ್ತೀಚೆಗೆ ಸಿಐಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದರು‌. ಸಿಐಡಿ ಕಸ್ಟಡಿಯಲ್ಲಿರುವ ಅವರೀಗ ವಿಚಾರಣೆ ಎದುರಿಸುತ್ತಿದ್ದಾರೆ. 

4 ತಿಂಗಳ ಹಿಂದೆ ಪಿಎಸ್‌ಐ ಅಕ್ರಮ ನೇಮಕಾತಿಯ ಹಗರಣ ಬಯಲಿಗೆ ಬರುತ್ತಿದ್ದಂತೆ ಎಸ್ಕೆಪ್ ಆಗಿದ್ದ ರಚನಾ ಆ ಬಳಿಕ ತಲೆಮರೆಸಿಕೊಂಡಿದ್ದರು. ಪಿಎಸ್‌ಐ ನೇಮಕಾತಿಯನ್ನು ಸರ್ಕಾರ ರದ್ದು ಮಾಡಿರುವ ಸಂದರ್ಭ ಬೆಂಗಳೂರಿನಲ್ಲಿ ಅಭ್ಯರ್ಥಿಗಳು ನಡೆಸಿರುವ ಹೋರಾಟದಲ್ಲಿ ರಚನಾ ಮುಂಚೂಣಿಯಲ್ಲಿ ಭಾಗವಹಿಸಿದ್ದರು‌. ಅವರ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿತ್ತು. ಆ ಬಳಿಕ ಹಗರಣದಲ್ಲಿ ಅವರ ಪಾತ್ರವೂ ಇದೆ ಎಂಬ ವಿಚಾರ ಬೆಳಕಿಗೆ ಬರುತ್ತಲೇ ತಲೆಮರೆಸಿಕೊಂಡು ಬಳಿಕ ಸಿಕ್ಕಿಬಿದ್ದಿದ್ದರು.

ವಿಚಾರಣೆ ನಡೆಸುತ್ತಿರುವ ಸಿಐಡಿಯ ಮುಂದೆ ರಚನಾ ತಮ್ಮ ಜೀವನದ ಅತಿ ನೋವಿನ ಕಥೆಯನ್ನು ವಿವರಿಸಿದ್ದಾರೆ. 'ನನ್ನ ತಾಯಿ ಶಿಕ್ಷಕಿ. ನನ್ನ ತಂದೆಗೆ ನಾನು ಹುಟ್ಟಿದ್ದೇ ಕೋಪಕ್ಕೆ ಕಾರಣವಾಯಿತು. ಏಕೆಂದರೆ ನಾನು ಹೆಣ್ಣಾಗಿ ಹುಟ್ಟಿದ್ದೆ . ಇದೇ ಕಾರಣಕ್ಕೆ ನಾನು ಹುಟ್ಟುತ್ತಲೇ ಅಪ್ಪ ಬಿಟ್ಟು ಹೋದರು. ಬಳಿಕ ನನ್ನ ತಾಯಿಯೇ ನನ್ನನ್ನು ಕಷ್ಟಪಟ್ಟು ಸಾಕಬೇಕಾಯಿತು. ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡು ಅವರು ನನ್ನನ್ನು ಸಾಕಿದರು. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯಿಂದ ಚೆನ್ನಾಗಿ ಓದಿದೆ.

ಬಳಿಕ ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿದೆ. ಎನ್ ಟಿಪಿಎಸ್ ಥರ್ಮಲ್ ಪ್ಲಾಂಟ್‌ನಲ್ಲಿ ಉದ್ಯೋಗವನ್ನು ನಿರ್ವಹಿಸಿದೆ‌. ಜೀವನದಲ್ಲಿ ಸಾಧನೆ ಮಾಡಬೇಕೆಂಬ ಕಾರಣಕ್ಕೆ ಎರಡು ಬಾರಿ ಪಿಎಸ್‌ಐ ಪರೀಕ್ಷೆ ಬರೆದೆ. ಎಷ್ಟೇ ಚೆನ್ನಾಗಿ ಪರೀಕ್ಷೆ ಬರೆದರೂ ನಾನು ಪಾಸ್ ಆಗಲೇ ಇಲ್ಲ. ಆಗ ನನಗೆ ಗುರುಬಸವರಾಜ್ ನ ಪರಿಚಯವಾಯ್ತು. ಆತ ನೀನು ಎಷ್ಟೇ ಚೆನ್ನಾಗಿ ಪರೀಕ್ಷೆ ಬರೆದರೂ ಪಾಸ್ ಆಗಲ್ಲ. ಅದಕ್ಕೆ ಬೇರೆ ಮಾರ್ಗವಿದೆ. 35 ಲಕ್ಷ ರೂ. ಕೊಟ್ಟಲ್ಲಿ ಪಾಸ್ ಆಗ್ತಿಯಾ ಎಂದು ಹೇಳಿದ. ನನ್ನ ಬಳಿ ಅಷ್ಟೊಂದು ಹಣ ಇರಲಿಲ್ಲ. ಆದರೆ ನಾನು ಪರೀಕ್ಷೆ ಪಾಸ್ ಆಗುವ ಪಣ ತೊಟ್ಟಿದ್ದೆ. ಕೊನೆಗೆ 30 ಲಕ್ಷ ರೂ.ಗೆ ಒಪ್ಪಿಕೊಂಡ. 15 ಲಕ್ಷ ರೂ. ಸಾಲ ಮಾಡಿ ನೀಡಿದೆ. ಪರೀಕ್ಷೆ ಬರೆದೆ. ಬಳಿಕ ಪರೀಕ್ಷೆಯಲ್ಲಿ ಟಾಪರ್ ಆದೆ.

ಆದರೆ ಕಲಬುರಗಿಯಲ್ಲಿ ಪಿಎಸ್‌ಐ ಹಗರಣ ಬೆಳಕಿಗೆ ಬಂದಿರೋದು ತಿಳಿಯಿತು. ಸರ್ಕಾರ ಸಂಪೂರ್ಣ ಪರೀಕ್ಷೆಯನ್ನೇ ರದ್ದು ಮಾಡಿದ್ದರಿಂದ ನಡೆದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿದ್ದೆ. ನಂತರ ಗುರುಬಸವರಾಜ್‌ಗೆ ಈ ಬಗ್ಗೆ ಕೇಳಿದಾಗ ಆತ ಧೈರ್ಯ ತುಂಬಿದ. ಇದು ಕಲಬುರಗಿಯಲ್ಲಿ ಆಗಿರೋದು, ನಿನ್ನ ತನಕ ಬರಲ್ಲ ಎಂದು ಹೇಳಿದ. ಇದನ್ನೇ ನಂಬಿ ನಾನೂ ಪ್ರತಿಭಟನೆ ಮುಂಚೂಣಿ ವಹಿಸಿದೆ. ಕೊನೆಗೆ ನನ್ನ ಮೇಲೂ ಕೇಸ್ ಆಯ್ತು . ಏನು ಮಾಡಬೇಕು ಎಂದು ತಿಳಿಯಲಿಲ್ಲ . ಹೆದರಿ ಓಡಿ ಹೋದೆ ಎಂದು ಹೇಳಿಕೊಂಡಿದ್ದಾರೆ.



Ads on article

Advertise in articles 1

advertising articles 2

Advertise under the article