ಜಾಕ್‌ಲೀನ್ ಫರ್ನಾಂಡಿಸ್‌ಗೆ ಬಾಲಿವುಡ್ ನಲ್ಲಿ ಬಾಯ್ಕಟ್ ಬಿಸಿ !

ಮುಂಬೈ: ಜಾಕ್‌ಲೀನ್ ಫರ್ನಾಂಡಿಸ್‌ಗೆ ಬಾಲಿವುಡ್ ನಲ್ಲಿ ಬಾಯ್ಕಟ್ ಬಿಸಿ ತಟ್ಟಿದೆಯಾ ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಇಲ್ಲದಿಲ್ಲ, ಏಕೆಂದರೆ ಕೆಲವೇ ವರ್ಷಗಳಿಂದ ಜಾಕ್‌ಲಿನ್, ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿಯಾಗಿದ್ದರು. ಆದರೆ ಆಕೆ ಯಾವಾಗ ವಂಚಕ ಸುಕೇಶ್ ಚಂದ್ರಶೇಖರ್ ಜತೆಗೆ ತಳಕು ಹಾಕಿಕೊಂಡಿತೋ, ಅಂದಿನಿಂದ ಜಾಕ್‌ಲೀನ್‌ಗೆ ಬಾಲಿವುಡ್‌ನಲ್ಲಿ ಬೇಡಿಕೆ ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ. 

ಹೌದು, ಬಾಲಿವುಡ್‌ನಲ್ಲಿ ಜಾಕ್‌ಲೀನ್‌ಗೆ ಬೇಡಿಕೆ ಬಹಳ ಕಡಿಮೆಯಾಗಿದೆ. ಈ ವರ್ಷ ಈಗಾಗಲೇ ಜಾಕ್‌ಲೀನ್ ಅಭಿನಯದ 'ಬಚ್ಚನ್ ಪಾಂಡೆ' , 'ಅಟ್ಯಾಕ್' ಹಾಗೂ ' ವಿಕ್ರಾಂತ್ ರೋಣ' ಸಿನಿಮಾಗಳು ಬಿಡುಗಡೆಯಾಗಿವೆ. ಮುಂದೆ 'ಸರ್ಕಸ್' ಮತ್ತು 'ರಾಮ್ ಸೇತು' ಸಿನಿಮಾಗಳು ಬಿಡುಗಡೆಯಾಗಲಿವೆ. ಇದೆಲ್ಲವೂ ವಂಚನೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬರುವ ಮೊದಲು ಒಪ್ಪಿಕೊಂಡ ಸಿನಿಮಾಗಳು. ಆ ಬಳಿಕ ಜಾಕ್‌ಲೀನ್ ಯಾವ ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. 

ಆದರೆ ಅವರು ಒಪ್ಪಿಕೊಂಡಿಲ್ಲ ಎನ್ನುವುದಕ್ಕಿಂತ ಯಾರೊಬ್ಬರು ಸಹ ಜಾಕ್ ಲೀನ್‌ಗೆ ಅವಕಾಶ ಕೊಡುವುದಕ್ಕೆ ಮುಂದಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಅವಕಾಶ ಕೊಟ್ಟು, ನಾಳೆ ಜಾಕ್ ಲೀನ್ ಸೆರೆವಾಸ ಅನುಭವಿಸಬೇಕಾಗಿ ಬಂದಲ್ಲಿ, ಮುಂದೆ ಸಿನಿಮಾಕ್ಕೆ ಸಮಸ್ಯೆ ಎದುರಾಗಬಹುದೆಂಬ ಭಯದಿಂದ ಬಾಲಿವುಡ್ ಮಂದಿಯಿಂದ ಜಾಕ್‌ಲೀನ್ ಗೆ ಬಾಯ್ಕಟ್ ಬಿಸಿ ತಟ್ಟಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಲೇ ಯಾವ ಹೊಸ ಸಿನಿಮಾಗಳಲ್ಲಿ ಅವರ ಹೆಸರು ಕಾಣುತ್ತಿಲ್ಲ.