ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡ ತಂದೆ ಪುತ್ರಿಯ ಶಾಲಾ ಶುಲ್ಕ ಭರಿಸದೆ ಆತ್ಮಹತ್ಯೆ

ಇಂದೋರ್ (ಮಧ್ಯಪ್ರದೇಶ): ಕೋವಿಡ್​ ಲಾಕ್​ಡೌನ್​ ಬಹಳಷ್ಟು ಮಂದಿಯ ಕೆಲಸ ಕಿತ್ತುಕೊಂಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಪುತ್ರಿಯ ಶಾಲಾ ಶುಲ್ಕವನ್ನು ಭರಿಸಲಾಗದ ತಂದೆಯೋರ್ವರು ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಇಲ್ಲಿನ ಹತೋಡ್ ಪ್ರದೇಶದ ನಿವಾಸಿ ಅಮಿತ್​ ಎಂಬವರೇ ಸಾವಿಗೆ ಶರಣಾದ ತಂದೆ.

ಅಮಿತ್ ಗೆ ಇಬ್ಬರು ಮಕ್ಕಳಿದ್ದು, ಅವರು ಲಾಕ್​ಡೌನ್​ ಸಂದರ್ಭ ಕೆಲಸ ಕಳೆದುಕೊಂಡಿದ್ದರು. ಇವರ ಓರ್ವ ಪುತ್ರಿ ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಆದರೆ, ಬೇರೆ ಕೆಲಸ ದೊರಕದ ಕಾರಣ ಪುತ್ರಿಯ ಶಾಲಾ ಶುಲ್ಕವನ್ನು ಭರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಾಲಾ ಆಡಳಿತ ಮಂಡಳಿಯವರು ಶುಲ್ಕ ಪಾವತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದರು. ಅಲ್ಲದೇ, ಬಾಲಕಿ ಮೂರನೇ ತರಗತಿಯನ್ನು ಪೂರೈಸಿದ್ದರೂ, 2ನೇ ತರಗತಿಯ ಫಲಿತಾಂಶವನ್ನು ಮಾತ್ರ ನೀಡಿದ್ದರು. 

ಪರಿಣಾಮ ಮನನೊಂದಿದ್ದ ತಂದೆ ಅಮಿತ್​ ಬುಧವಾರ ಬೆಳಗ್ಗೆ ಮನೆಯಲ್ಲಿಯೇ ವಿಷ ಸೇವಿಸಿದ್ದಾರೆ. ಬಳಿಕ ಮನೆಯ ಮೇಲಿಂದ ಕೆಳಗಿಳಿದು ಬರುವ ವೇಳೆ ಹೊಸ್ತಿಲ ಮೇಲೆಯೇ ಬಿದ್ದಿದ್ದಾರೆ. ತಕ್ಷಣ ಅವರನ್ನು ಸಹೋದರ ಸಂದೀಪ್ ಮತ್ತು ತಾಯಿ ಸೇರಿಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅಮಿತ್​ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಇತ್ತ, ಅಮಿತ್ ಪತ್ನಿ 3 ತಿಂಗಳಿನಿಂದ ತವರು ಮನೆಯಲ್ಲಿ ಇದ್ದಾರೆ ಎನ್ನಲಾಗಿದೆ. ಪುತ್ರಿಯ ಶಾಲಾ ಶುಲ್ಕ ಕಟ್ಟಲು ಸಹಾಯಕ್ಕಾಗಿ ಕೆಲ ಜನಪ್ರತಿನಿಧಿಗಳಿಗೂ ಅಮಿತ್​ ಮನವಿ ಮಾಡಿದ್ದರು. ಆದರೆ, ಯಾರೂ ಸಹಾಯ ಮಾಡದೆ ಹತಾಶರಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ