ಬೆಂಗಳೂರು: ಬೈಕ್ ಸುರಕ್ಷಿತ ಸ್ಥಳದಲ್ಲಿಡಲು ಹೋಗಿ ಧಾರಾಕಾರ ಮಳೆಗೆ ಕೊಚ್ಚಿಕೊಂಡು ಹೋದ ಯುವಕ

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಬೈಕ್ ಕೊಚ್ಚಿಹೋಗುವುದನ್ನು ತಡೆಯಲು ಹೋಗಿ ಯುವಕನೋರ್ವನು ನೀರುಪಾಲಾದ ಘಟನೆ ಕೆ ಆರ್ ಪುರದ ಗಾಯತ್ರಿ ಬಡಾವಣೆಯಲ್ಲಿ ನಡೆದಿದೆ.    

ಮಿಥುನ್(24) ಎಂಬಾತ ಮಳೆ ನೀರಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಯುವಕ. ಸದ್ಯ ಅಗ್ನಿಶಾಮಕ ಸಿಬ್ಬಂದಿ, ಎನ್​ಡಿಆರ್​ಎಪ್​​ ಸಿಬ್ಬಂದಿಯು ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿದ ಪರಿಣಾಮ ರಾತ್ರಿ 12ರ ಸುಮಾರಿಗೆ ಕೆ ಆರ್ ಪುರದ ಗಾಯತ್ರಿ ಬಡಾವಣೆ ಜಲಾವೃತಗೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಕುಸಿದು ಬಿದ್ದಿದೆ. ಪರಿಣಾಮ ಆತನ ಬೈಕ್ ನೀರಿನಲ್ಲಿ ಕೊಚ್ಚಿ ಹೋಗುತ್ತಿತ್ತು. ಆದ್ದರಿಂದ ಬೈಕ್ ಅನ್ನು ಸುರಕ್ಷಿತ ಸ್ಥಳದಲ್ಲಿರಿಸಲು ಮಿಥುನ್ ಮುಂದಾಗಿದ್ದಾನೆ. ಆದರೆ ಸುರಿಯುತ್ತಿದ್ದ ಮಳೆಯ ನೀರಿನಲ್ಲಿ ಆತನೇ ಕೊಚ್ಚಿಕೊಂಡು ಹೋಗಿದ್ದಾನೆ. 

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕದಳ ಹಾಗೂ ಎಸ್.ಡಿ.ಆರ್.ಎಫ್ ಸಿಬ್ಬಂದಿ ಎರಡು ತಂಡಗಳಾಗಿ ಯುವಕನ ಹುಡುಕಾಟ ನಡೆಸುತ್ತಿದೆ. ರಾಜಕಾಲುವೆ ಮಾರ್ಗದಲ್ಲಿನ ಕಬ್ಬಿಣದ ಜಾಲರಿಗಳಲ್ಲಿ ಮೊದಲಿಗೆ ಹುಡುಕಾಟ ನಡೆದಿದೆ. ಇಲ್ಲಿ ಯುವಕ ಪತ್ತೆಯಾಗದಿದ್ದಲ್ಲಿ ಕೆರೆಯಲ್ಲಿ ಶೋಧಕಾರ್ಯ ನಡೆಸುವ ಸಾಧ್ಯತೆ ಇದೆ.
BREAKING NEWS
Loading latest news...
Join our WhatsApp Channel Powered By : Online Pudu