
ಉಡುಪಿ: ಅಪಹರಣದ ನಾಟಕವಾಡಿ ಪಾಲಕರಿಂದಲೇ 5ಲಕ್ಷ ರೂ.ಗೆ ಬೇಡಿಕೆಯಿಟ್ಟ ಯುವಕ ಸಿಕ್ಕಿಬಿದ್ದಿರೋದೇ ರೋಚಕ ಕತೆ!
6/29/2022 09:51:00 AM
ಉಡುಪಿ: ಅಪಹರಣದ ನಾಟಕವಾಡಿ ಪಾಲಕರಿಗೆ 5ಲಕ್ಷ ರೂ. ಬೇಡಿಕೆಯಿಟ್ಟ ಯುವಕನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಉಡುಪಿಯ ವರುಣ್ ನಾಯಕ್ ಎಂಬಾತನೇ ತಾನು ಅಪಹರಣಕ್ಕೊಳಗಾಗಿದ್ದೇನೆ ಎಂದು ನಾಟಕವಾಡಿದಾತ.
ಈತ ತನ್ನನ್ನು ಯಾರೋ ಅಪಹರಣ ಮಾಡಿದ್ದಾರೆಂದು 5 ಲಕ್ಷ ರೂ. ಕೊಡಿ ಎಂದು ತಾಯಿಗೆ ಕರೆ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಪಹರಣದ ಪ್ರಕರಣ ದಾಖಲಿಸಿದ ಪೊಲೀಸರು ತಂಡ ರಚನೆ ನಡೆಸಿ ಕಾರ್ಯಾಚರಣೆ ನಡೆಸಿದ್ದರು. ಆ ಬಳಿಕ ಯುವಕ ಇರುವ ಲೊಕೇಶನ್ ಅನ್ನು ಪತ್ತೆ ಹಚ್ಚಿದಾಗ ಆತ ಗೋವಾದಲ್ಲಿರೋದು ತಿಳಿದು ಬಂದಿದೆ. ಆ ಲೊಕೇಶನ್ ನ ಬೆನ್ನು ಹತ್ತಿ ಹೋದ ಪೊಲೀಸ್ ತಂಡಕ್ಕೆ ಅಲ್ಲಿನ ದೃಶ್ಯ ಕಂಡು ಶಾಕ್ ಆಗಿತ್ತು. ಅಷ್ಟಕ್ಕೂ ಅಲ್ಲಿ ಏನಾಗಿದೆ ಎಂದರೆ ಅಪಹರಣಕ್ಕೊಳಗಾಗಿದ್ದೇನೆಂದು ಹೇಳಿದ್ದ ವರುಣ್ ತನ್ನ ಸ್ನೇಹಿತರೊಂದಿಗೆ ಕ್ಯಾಸಿನೋ ಆಟವಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿದ್ದ.
ತಕ್ಷಣ ವರುಣ್ ನಾಯಕ್ ನನ್ನು ಬಂಧಿಸಿರುವ ಪೊಲೀಸರು ವಿಚಾರಿಸಿದಾಗ ಪಾಲಕರಿಂದ ಹಣ ಪಡೆಯಲು ಈ ಕಿಡ್ನ್ಯಾಪ್ ನಾಟಕವಾಡಿರೋದು ಬಯಲಾಗಿದೆ. ಇದೀಗ ಪಾಲಕರ ಹಣವನ್ನು ಎಗರಿಸಲು ಸಂಚು ರೂಪಿಸಿರುವ ಹಾಗೂ ಪೊಲೀಸರ ಸಮಯ ವ್ಯರ್ಥ ಮಾಡಿರುವ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ 15 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.