
ಕೊರೊನಾ ಆದಷ್ಟು ಶೀಘ್ರದಲ್ಲೇ ತೊಡಗುತ್ತದೆ: ಭರವಸೆಯ ಮಾತನ್ನು ಹೇಳಿದ ಅಮೇರಿಕಾದ ಪ್ರಸಿದ್ಧ ವೈರಾಲಜಿಸ್ಟ್
1/16/2022 07:27:00 AM
ವಾಷಿಂಗ್ಟನ್: ಕಳೆದ ಎರಡೂವರೆ ವರ್ಷಗಳಿಂದ ಕೋವಿಡ್ ನಿಂದ ಎಲ್ಲೆಡೆಯು ಜನರು ಬದುಕು ನಡೆಸಲಾಗದೆ ತತ್ತರಿಸಿ ಹೋಗಿದ್ದಾರೆ. ಇದೀಗ ಈ ನಡುವೆಯೇ ಒಮಿಕ್ರಾನ್ ಸೇರಿದಂತೆ ಹಲವಾರು ವೈರಸ್‌ಗಳು ಬಾಧಿಸಲು ಶುರು ಮಾಡಿದೆ. ಈ ವೈರಸ್ ಗೆ ಅಂತ್ಯವೇ ಇಲ್ಲವೆನ್ನುವಂತಹ ಸ್ಥಿತಿಗೆ ನಾವು ತಲುಪಿದ್ದೇವೆ. ಇದೀಗ ವಾಷಿಂಗ್ಟನ್ನ ವಿಜ್ಞಾನಿ ಮತ್ತು ವೈರಾಲಜಿಸ್ಟ್ ಡಾ.ಕುತುಬ್ ಮಹಮೂದ್ ನೆಮ್ಮದಿಯ ವಿಷಯವೊಂದನ್ನು ತಿಳಿಸಿದ್ದಾರೆ.
ಅದೇನೆಂದರೆ ಕೊರೊನಾ ಸೋಂಕಿನ ಅಂತ್ಯ ಭಾರೀ ಹತ್ತಿರದಲ್ಲಿದೆ. ಕೊರೊನಾ ಲಸಿಕೆಯು ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಈ ಸಾಂಕ್ರಾಮಿಕ ರೋಗವು ಇನ್ನು ಹೆಚ್ಚು ಕಾಲ ಉಳಿಯೋಲ್ಲ. ಕೊರೊನಾ ರೂಪಾಂತರಿಯಾಗುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಲಸಿಕೆಯ ಮೂಲಕ ಅವನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಹಲವು ಸಂದರ್ಭಗಳಲ್ಲಿ ಸೋಂಕು ಮರುಕಳಿಸಿ ಬರಬಹುದು. ಆದರೆ ಅದನ್ನು ಬೂಸ್ಟರ್ ಡೋಸ್ನಿಂದ ಎದುರಿಸಬಹುದು ಎಂದು ಸುದ್ದಿಸಂಸ್ಥೆ ಎಎನ್ಐ ಜತೆ ಅವರು ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದ್ದಾರೆ.
ಈ ವೈರಸ್ ಶಾಶ್ವತವಾಗಿ ಮುಂದುವರಿಯುವುದಿಲ್ಲ. ಇದು ಮನುಷ್ಯ ಹಾಗೂ ವೈರಸ್ ನಡುವಿನ ಪಗಡೆಯಾಟದಂತೆ. ಇದರಲ್ಲಿ ಮನುಷ್ಯನ ಸಣ್ಣ ನಡೆಗಳೆಂದರೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ. ವೈರಸ್ ವಿರುದ್ಧ ದೊಡ್ಡ ಅಸ್ತ್ರವೆಂದರೆ ಲಸಿಕೆ, ರೋಗನಿರೋಧಕ ಪ್ರತಿಕಾಯಗಳಾಗಿವೆ. ಆದರೆ ಇಲ್ಲಿ ವಿಜೇತರಿಲ್ಲ. ಪಂದ್ಯ ಡ್ರಾ ಆಗಲಿದೆ. ಇದರ ಅರ್ಥ ವೈರಸ್ ತೊಲಗಲಿದೆ. ಶೀಘ್ರದಲ್ಲೇ ಎಲ್ಲರೂ ಮಾಸ್ಕ್ ಇಲ್ಲದೇ ಓಡಾಡುವ ದಿನಗಳು ಬರಲಿವೆ. ಭಾರತವು ವರ್ಷದೊಳಗೆ ಶೇ.60 ರಷ್ಟು ಲಸಿಕೆ ನೀಡಿಕೆಯನ್ನು ಪೂರ್ತಿಗೊಳಿಸಿದ್ದಕ್ಕೆ ದೇಶವನ್ನು ಇದೇ ವೇಳೆ ಡಾ.ಕುತುಬ್ ಅಭಿನಂದಿಸಿದ್ದಾರೆ.
ಭಾರತೀಯ ಲಸಿಕೆಗಳನ್ನು ಜಾಗತಿಕವಾಗಿ ಬಳಸಲಾಗುತ್ತದೆ. ಈ ಒಂದು ವರ್ಷದಲ್ಲಿ ನಾವು ಸುಮಾರು 60 ಪ್ರತಿಶತದಷ್ಟು ಲಸಿಕೆಯ ಗುರಿ ಸಾಧಿಸಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ್ ಬಯೋಟೆಕ್ ತಯಾರಿಸಿರುವ ಕೊವ್ಯಾಕ್ಸಿನ್ನ ಬೂಸ್ಟರ್ ಡೋಸ್ ಒಮಿಕ್ರಾನ್ ವಿರುದ್ಧ 90 ಪ್ರತಿಶತ ಪರಿಣಾಮಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಡಾ.ಕುತುಬ್, ಎರಡು ವರ್ಷದ ಮಕ್ಕಳಲ್ಲೂ ಇದು ಪರಿಣಾಮಕಾರಿಯಾಗಿದೆ ಎಂದಿದ್ದಾರೆ.