ಪುಟ್ಟ ಕಂದಮ್ಮನ ಮೇಲೆ ಕಾಮುಕನ ಅಟ್ಟಹಾಸ: ರಾಷ್ಟ್ರೀಯ ಹೆಣ್ಣುಮಕ್ಕಳ ದಿನದಂದೇ ನಡೆಯಿತು ಹೇಯ ಕೃತ್ಯ

ಪುರಿ (ಒಡಿಶಾ): ರಾಷ್ಟ್ರೀಯ ಹೆಣ್ಣುಮಕ್ಕಳ ದಿನವಾದ ನಿನ್ನೆ ಐದರ ಪುಟ್ಟ ಬಾಲೆಯ ಮೇಲೆ ಅತ್ಯಂತ ಹೇಯ ಕೃತ್ಯವೊಂದು ನಡೆದಿದೆ. ಇದೀಗ ಈ ಪುಟ್ಟ ಕಂದಮ್ಮ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದೆ. 

ಪುರಿಯಲ್ಲಿ ಈ ಬಾಲಕಿ ಅಪ್ಪ-ಅಮ್ಮನೊಂದಿಗೆ ವಾಸಿಸುತ್ತಿದ್ದಳು. ನೆರೆಮನೆಗೆ ಬಂದಿದ್ದ ಮಹೇಶ್ ಮೊಹಂತಿ (35) ಎಂಬ ಕಾಮ ಪಿಶಾಚಿಯ ಕಣ್ಣು ಈ ಪುಟ್ಟ ಬಾಲೆಯ ಮೇಲೆ ಬಿದ್ದಿದೆ. ಈತನ ಮನೆಯ ನವೀಕರಣ ಕಾರ್ಯ ನಡೆಯುತ್ತಿತ್ತು. ಆದ್ದರಿಂದ ಈ ಕಾಮುಕ ಬಾಲಕಿಯ ಮನೆಯ ಪಕ್ಕದ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದ. 

ಆ ಬಳಿಕ ಬಾಲಕಿಯ ಅಪ್ಪ, ಅಮ್ಮನ ಜತೆ ಒಡನಾಟ ಬೆಳೆಸಿದ್ದ. ಬಳಿಕ ಆತ ತನ್ನ ಸ್ವಂತ ಮನೆಗೆ ವಾಪಸ್‌ ಹೋದ ಬಳಿಕವೂ ಬಾಲಕಿಯ ಮೇಲೆ ಕಣ್ಣು ಹಾಕಿದ್ದರಿಂದ ಅವರ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದ. ಬಾಲಕಿ ಕೂಡ ಆತನನ್ನು ಅಂಕಲ್‌ ಅಂಕಲ್‌ ಎಂದು ಮಾತನಾಡಿಸುತ್ತಿದ್ದಳು. 

ಇಂದು ಮತ್ತೆ ಮನೆಗೆ ಮಹೇಶ್‌ ಬಂದಿದ್ದಾಗ ಮನೆಯ ಹೊರಗೆ ಬಾಲಕಿ ಆಡುತ್ತಿದ್ದಳು. ಆಕೆಯನ್ನು ಮನೆಯ ಚಾವಣಿ ಮೇಲೆ ಕರೆದುಕೊಂಡು ಹೋಗಿ ಈ ಕಾಮುಕ ಅತ್ಯಾಚಾರ ಎಸಗಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಬಾಲಕಿ ಜೋರಾಗಿ ಅಳಲು ಶುರು ಮಾಡಿದಾಗ ಅಕ್ಕಪಕ್ಕದ ಮನೆಯವರು ನೋಡಿದ್ದಾರೆ. ಈತ ಅಲ್ಲಿಂದ ಓಡಿಹೋಗಿದ್ದನ್ನು ಕಂಡಿದ್ದಾರೆ. ತಕ್ಷಣ ಬಾಲಕಿಯ ಅಮ್ಮ ಹಾಗೂ ಅಕ್ಕಪಕ್ಕದ ಮನೆಯವರು ಚಾವಣಿ ಮೇಲೆ ಹೋದಾಗ ಬಾಲಕಿಯ ಸ್ಥಿತಿ ಚಿಂತಾಜನಕವಾಗಿತ್ತು. 

ತಕ್ಷಣವೇ ಬಾಲಕಿಯನ್ನು ಪುರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅದಾಗಲೇ ಬಾಲಕಿಯ ಖಾಸಗಿ ಅಂಗಕ್ಕೆ ಭಾರಿ ಗಾಯವಾಗಿದ್ದರಿಂದ ಆಕೆಯ ಸ್ಥಿತಿ ಚಿಂತಾಜನಕವಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ಸದ್ಯ ಬಾಲಕಿಯನ್ನು ಕಟಕ್‌ನಲ್ಲಿರುವ ಎಸ್​ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.