ಹುಟ್ಟುಹಬ್ಬದಂದೇ ವಾಹನ ಹರಿದು 19ರ ಯುವತಿ ಮೃತ್ಯು!

ಬೆಂಗಳೂರು: ಬೈಕ್ ನಲ್ಲಿ ಹೋಗುತ್ತಿದ್ದ ಯುವತಿ ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ವಾಹನವೊಂದು ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಹೆಬ್ಬಾಳ‌ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ‌.

ಹೆಬ್ಬಾಳದ ಭದ್ರಪ್ಪ ಲೇಔಟ್ ನಿವಾಸಿ ಮಹಶ್ರೀ ಮೃತಪಟ್ಟಿರುವ ದುದೈರ್ವಿ. ಆಕೆ ತನ್ನ 19ನೇ ವರ್ಷದ ಹುಟ್ಟುಹಬ್ಬದ ದಿನವೇ ಮೃತಪಟ್ಟಿರೋದು ವಿಷಾದನೀಯ.

ಮೃತ ಮಹಶ್ರೀ ಮಲ್ಲೇಶ್ವರಂ ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಟೆಕ್ಸ್​ಟೈಲ್ಸ್ ಅಂಗಡಿಯೊಂದರಲ್ಲಿ ಪಾರ್ಟ್​ ಟೈಮ್ ಕೆಲಸ ಮಾಡಿಕೊಂಡಿದ್ದರು. ಇಂದು ಆಕೆ ತನ್ನ 19ನೇ ವರ್ಷದ ಬರ್ತ್ ಡೇ ಆಚರಿಸುತ್ತಿದ್ದಳು. ಆಕೆಯ ಹುಟ್ಟುಹಬ್ಬವಾದ್ದರಿಂದ ಮನೆಯಲ್ಲಿಯೇ ಇರು ಎಂದು ಕುಟುಂಬಸ್ಥರು ಹೇಳಿದ್ದರು. 

ಆದರೂ ಮಹಶ್ರೀ ಪೋಷಕರ ಮಾತನ್ನು ಕೇಳದೆ ಕೆಲಸಕ್ಕೆ ಹೋಗುತ್ತೇನೆಂದು ಹಠ ಮಾಡಿ ಕೆಲಸಕ್ಕೆ ಹೋಗಿದ್ದಾಳೆ. ಆದ್ದರಿಂದ ಆಕೆಯ ಚಿಕ್ಕಪ್ಪ ಬಸ್ ಸ್ಟ್ಯಾಂಡ್​ವರೆಗೂ ಜೊತೆಯಲ್ಲೇ ಹೋಗಿ‌ ಬಿಟ್ಟು ಬಂದಿದ್ದಾರೆ. ಆ ಬಳಿಕ ಆಕೆ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ತೆರಳಿದ್ದಾಳೆ. ಆಗ ಆಯತಪ್ಪಿ ಬಿದ್ದ ಆಕೆ ಹಿಂದೆ ಬರುತ್ತಿದ್ದ ವಾಹನವೊಂದರ ಅಡಿಗೆ ಬಿದ್ದಿದ್ದಾಳೆ‌. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹೆಬ್ಬಾಳ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನ ಚಾಲಕ ಹಾಗೂ ಮೃತ ಯುವತಿ ಸ್ನೇಹಿತನನ್ನು ವಿಚಾರಣೆಗೊಳಪಡಿಸಿದ್ದಾರೆ.