ಶೀನಾ ಬೋರಾ ಸತ್ತಿಲ್ಲ, ಕಾಶ್ಮೀರದಲ್ಲಿದ್ದಾಳೆ ಪತ್ತೆ ಹಚ್ಚಿ ಎಂದು ಸಿಬಿಐಗೆ ಪತ್ರ ಬರೆದ ಇಂದ್ರಾಣಿ ಮುಖರ್ಜಿ: 2012ರ ಕೊಲೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್

ಮುಂಬೈ: ಮಗಳನ್ನೇ ಹತ್ಯೆ ಮಾಡಿರುವ ಇಂದ್ರಾಣಿ ಮುಖರ್ಜಿ ಹಾಗೂ ಹತ್ಯೆಯಾದ ಶೀನಾ ಬೋರಾ ಬಗ್ಗೆ ಯಾರಿಗೂ ಹೆಚ್ಚೇನು ಹೇಳಬೇಕೆಂದಿಲ್ಲ. ಯಾಕೆಂದರೆ ಈ ಎರಡು ಹೆಸರು ಅಷ್ಟೊಂದು ಸಂಚಲನ ಸೃಷ್ಟಿ ಮಾಡಿತ್ತು. 2012ರ ಏಪ್ರಿಲ್‌ನಲ್ಲಿ ನಡೆದಿದ್ದ ಈ ಮರ್ಡರ್‌ ಮಿಸ್ಟ್ರಿ ಮೂರು ವರ್ಷಗಳ ಬಳಿಕ ಬೆಳಕಿಗೆ ಬಂದಿತ್ತು. ಅಲ್ಲದೆ ಪ್ರಕರಣ ದೇಶಾದ್ಯಂತ ಬಾರಿ ಕುತೂಹಲ ಕೆರಳಿಸಿತ್ತು. ಕೇಸ್‌ನ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಒಂದು ದೊರಕಿರುವ ಹಿನ್ನೆಲೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ.

ಇದೀಗ ಹತ್ಯೆ ಆರೋಪಿ ಎಂದು ಹಣೆಪಟ್ಟಿ ಹೊತ್ತಿರುವ ಇಂದ್ರಾಣಿ ಮುಖರ್ಜಿ ಸಿಬಿಐಗೆ ಬರೆದಿರುವ ಪತ್ರದ ಮೂಲಕ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌ ಒಂದನ್ನು ನೀಡಿದ್ದಾರೆ.‌ ಇಂದ್ರಾಣಿ ಬರೆದಿರುವ ಪತ್ರದಲ್ಲಿ "ಶೀನಾ ಬೋರಾ ಸತ್ತಿಲ್ಲ, ನಾವು ಆಕೆಯನ್ನು ಹತ್ಯೆ ಮಾಡಲಿಲ್ಲ. ಆಕೆ ಕಾಶ್ಮೀರದಲ್ಲಿ ಜೀವಂತವಾಗಿದ್ದಾಳೆ ಎಂದಿದ್ದಾರೆ. ಕಾಶ್ಮೀರದಲ್ಲಿ ಮಹಿಳೆಯೊಬ್ಬರು ಶೀನಾ ಬೋರಾಳನ್ನು ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಆಕೆಯನ್ನು ಪತ್ತೆ ಮಾಡಿ ಕರೆತನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದು ಈಗ ಸಿಬಿಐಗೆ ತಲೆಕೆಡಿಸಿದ್ದು,  ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದೆ.

ಪ್ರಕರಣವೇನು?: ಟಿ.ವಿ.ಚಾನೆಲೊಂದರ ಒಡತಿಯಾಗಿದ್ದ ಇಂದ್ರಾಣಿ ಮುಖರ್ಜಿ, ತನಗೆ ಅನಧಿಕೃತ ಸಂಬಂಧದಿಂದ ಹುಟ್ಟಿರುವ ಪುತ್ರಿ ಶೀನಾ ಬೋರಾಳನ್ನು ಕೊಲೆ ಮಾಡಿರುವ ಆರೋಪ ಹೊತ್ತ ಪ್ರಕರಣ ಇದಾಗಿದೆ. ಶೀನಾ ಹಾಗೂ ಮಿಖಾಯಿಲ್ ಇಬ್ಬರೂ ಇಂದ್ರಾಣಿಯ ಮೊದಲ ಸಂಬಂಧದಿಂದ ಜನಿಸಿರುವ ಮಕ್ಕಳು. ಆದರೆ ಈ ರಹಸ್ಯವನ್ನು ಕಾಪಾಡಿಕೊಂಡಿದ್ದ ಇಂದ್ರಾಣಿ, ಗುವಾಹಟಿಯಲ್ಲಿನ ತನ್ನ ಪಾಲಕರ ಬಳಿ ಈ ಮಕ್ಕಳನ್ನು ಇರಿಸಿದ್ದಳು. 22 ವರ್ಷದ ಶೀನಾ ಬೋರಾ ಮುಂಬೈಗೆ ಬಂದಾಗ, ಆಕೆಗೆ ಇಂದ್ರಾಣಿಯ ಸಹೋದರಿಯ ಮಗಳು ಎಂದು ಹೇಳಿಕೊಳ್ಳಬೇಕು. ಅಲ್ಲದೆ ತಾನು ಇಂದ್ರಾಣಿ ಮಗಳು ಎಂಬ ಗುರುತು ಬಹಿರಂಗಪಡಿಸಬಾರದು ಎಂಬ ಷರತ್ತು ವಿಧಿಸಲಾಗಿತ್ತು.

ಆದರೆ ಈ ಮಗಳು ತಾಯಿಯನ್ನೇ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಳು. ಹೀಗಾಗಿ ಇಂದ್ರಾಣಿ ತನ್ನ ಎರಡನೆಯ ಪತಿಯೊಂದಿಗೆ ಶೀನಾಳನ್ನು ಕೊಲೆ ಮಾಡಿ, ಮಿಖಾಯಿಲ್‌ನನ್ನೂ ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂಬ ಆರೋಪವಿದೆ. ಈ ಕೊಲೆಯಲ್ಲಿ ಸಂಜೀವ್ ಖನ್ನಾ (ಶೀನಾ ಬೋರಾ ಅಪ್ಪ) ಕೂಡ ಆರೋಪಿ.

ಇಂದ್ರಾಣಿ ಹಾಗೂ ಪೀಟರ್ 2002ರಲ್ಲಿ ಮದುವೆಯಾಗಿದ್ದರು. 2019ರ ಅಕ್ಟೋಬರ್‌ನಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ. ಕೊಲೆ ಆರೋಪ ಹೊತ್ತ ಪೀಟರ್ ಮುಖರ್ಜಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಬೇರೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಇಂದ್ರಾಣಿ ಮುಖರ್ಜಿ ಚಾಲಕ ಶ್ಯಾಮವರ್ ರೈ ಎಂಬಾತನನ್ನು ವಿಚಾರಣೆ ನಡೆಸಿದ್ದ ವೇಳೆ ಶೀನಾ ಬೋರಾ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು. 

2012ರ ಎಪ್ರಿಲ್‌ನಲ್ಲಿ ಇಂದ್ರಾಣಿ ಮುಖರ್ಜಿ, ಸಂಜೀವ್ ಖನ್ನಾ ಹಾಗೂ ಶ್ಯಾಮವರ್ ರೈ ಕಾರಿನಲ್ಲಿ ಶೀನಾ ಬೋರಾ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ರಾಯಗಡ ಜಿಲ್ಲೆಯ ಕಾಡೊಂದರಲ್ಲಿ ಆಕೆಯ ಮೃತದೇಹವನ್ನು ಸುಟ್ಟುಹಾಕಿದ್ದರು ಎಂಬ ಆರೋಪವಿದೆ.