ಮಂಗಳೂರು: ಕಲ್ಲು ಗಣಿಗಾರಿಕೆ
ವಿರುದ್ದ ನಡೆದ ಪ್ರತಿಭಟನೆ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರ ಕೊರಳಪಟ್ಟಿ
ಹಿಡಿಯುತ್ತೇವೆ ಎಂದು ಬೆದರಿಕೆಯೊಡ್ಡಿದ ಹಿಂದೂ ಸಂಘಟನೆಯ ಮುಖಂಡನ ವಿರುದ್ದ ಪುಂಜಲ್ ಕಟ್ಟೆ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳದ ಕಾರಿಂಜದಲ್ಲಿ ಕಲ್ಲು ಗಣಿಗಾರಿಕೆ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಯ ಮುಖಂಡ ಜಗದೀಶ್ ಕಾರಂತ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಅವರನ್ನು ಉದ್ದೇಶಿಸಿ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ನಡೆಯುವ ಗಣಿಗಾರಿಕೆಯನ್ನು ನಿಲ್ಲಿಸಲು ಡಿಸೆಂಬರ್ 21 ರೊಳಗೆ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಲಗ್ಗೆ ಹಾಕಿ ಅವನ ಕೊರಳಪಟ್ಟಿಯನ್ನು ಹಿಡಿಯುತ್ತೇವೆ.
ತಾಕತ್ತಿದ್ದರೆ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸೋ, ಇಲ್ಲವಾದರೆ ಟ್ರಾನ್ಸ್ ಫರ್ ತೆಗೆದುಕೊಂಡು ಹೋಗು ಎಂದು ಏಕವಚನದಲ್ಲಿ ಮತ್ತು ಅಸಭ್ಯ ರೀತಿಯಲ್ಲಿ ಜಿಲ್ಲಾಧಿಕಾರಿ ಹುದ್ದೆಗೆ ಅಗೌರವ ತೋರಲಾಗಿದೆ ಎಂದು ಜಿಲ್ಲಾಧಿಕಾರಿಗಳು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.