Mangalore; ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ನಕ್ಸಲ್ ಸಂಪರ್ಕ ಪ್ರಕರಣ- ವಿಠಲ ಮಲೆಕುಡಿಯ ನಿರ್ದೋಷಿ ಎಂದ ಕೋರ್ಟ್


ಮಂಗಳೂರು: ನಕ್ಸಲ್ ಚಟುವಟಿಕೆಯಲ್ಲಿ ಸಂಬಂಧ ಹೊಂದಿದ್ದರು ಎಂದು ಬಂಧಿತನಾಗಿದ್ದ   ವಿಠಲ ಮಲೆಕುಡಿಯನನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ.

ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಬೆಳ್ತಂಗಡಿಯ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ನಿರ್ದೋಷಿಗಳು ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ತೀರ್ಪು ನೀಡಿದ್ದಾರೆ.




2012ರ ಮಾರ್ಚ್ 3ರಂದು ಬೆಳ್ತಂಗಡಿಯ ಕುತ್ಲೂರು ನಿವಾಸಿಯಾಗಿದ್ದ ವಿಠಲ ಮಲೆಕುಡಿಯನನ್ನು  ನಕ್ಸಲ್ ನಿಗ್ರಹ ದಳವು ನಕ್ಸಲ್ ಸಂಪರ್ಕದ ಆರೋಪವೊರಿಸಿ ಬಂಧಿಸಿತ್ತು.  ದೋಷಾರೋಪ ಪಟ್ಟಿಯಲ್ಲಿಯೂ ವಿಠಲ ಮಲೆಕುಡಿಯನನ್ನು ಆರನೇ ಆರೋಪಿಯನ್ನಾಗಿ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು ಏಳನೇ ಆರೋಪಿಯನ್ನಾಗಿಸಲಾಗಿತ್ತು. 



ಬಂಧನ ಸಮಯದಲ್ಲಿ ವಿಠಲ ಮಲೆಕುಡಿಯ ಮಂಗಳೂರು ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು. ಜೈಲಿನಲ್ಲಿದ್ದ ಸಮಯದಲ್ಲಿ ಪರೀಕ್ಷೆಗೆ ಹಾಜರುಪಡಿಸಿದ್ದ ಪೊಲೀಸರು, ಕೈಕೊಳ ತೊಟ್ಟು ಪರೀಕ್ಷೆ ಬರೆಯುವಂತೆ ಮಾಡಿದ್ದರು. ಇದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು