
Fake Raid-Accused arrest- ಲಾಕ್‌ಡೌನ್ ಸಮಯದಲ್ಲಿ ನಕಲಿ ರೇಡ್: ಪಾಲಿಕೆ ಅಧಿಕಾರಿಗಳ ಹೆಸರಲ್ಲಿ ಲಂಚ, ಆರೋಪಿಗಳ ಸೆರೆ
ಮಂಗಳೂರು ನಗರದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಅಂಗಡಿ ಮಳಿಗೆಗೆ ನುಗ್ಗಿ ಪಾಲಿಕೆ ಅಧಿಕಾರಿಗಳೆಂದು ಹೇಳಿ ನಕಲಿ ರೇಡ್ ಮಾಡಿದ್ದಲ್ಲದೆ, ವ್ಯಾಪಾರಿಯಿಂದ ಲಂಚದ ಹಣಕ್ಕೆ ಬೇಡಿಕೆ ನೀಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಟೋಕಿಯೋ ಮಾರ್ಕೆಟ್ ಮೊದಲ ಮಹಡಿಯಲ್ಲಿ ಸಾಗರ್ ವೆಡ್ಡಿಂಗ್ ಬಟ್ಟೆ ಅಂಗಡಿಗೆ ನುಗ್ಗಿದ್ದ ಮೂವರು ಆರೋಪಿಗಳು ತಾವು ಪಾಲಿಕೆ ಅಧಿಕಾರಿಗಳೆಂದು ಹೇಳಿಕೊಂಡು ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದ್ದಾರೆ.
ಅಂಗಡಿ ಸೀಜ್ ಮಾಡಿ ದಂಡ ಹಾಕುತ್ತೇವೆ ಎಂದು ಬೆದರಿಸಿ 50 ಸಾವಿರ ರೂ. ಹಣ ನೀಡಬೇಕೆಂದು ಆರೋಪಿಗಳು ಬೇಡಿಕೆ ಇಟ್ಟಿದ್ದರು. ಇದಕ್ಕೆ ಅಂಗಡಿ ಮಾಲೀಕರು ಒಪ್ಪದಿದ್ದಾಗ ಕನಿಷ್ಟ 10 ಸಾವಿರ ರೂ. ನೀಡುವಂತೆ ಒತ್ತಾಯಿಸಿದರು.
ಇವರ ಹಾವಭಾವ ಮತ್ತು ನಡವಳಿಕೆ ಗಮನಿಸಿದ ಮೇಲೆ ಅನುಮಾನಗೊಂಡು ಅಂಗಡಿ ಮಾಲಕರು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತಕ್ಷಣ ರಂಗಕ್ಕೆ ಇಳಿದ ಮಂಗಳೂರು ಉತ್ತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಉಳಿದಿಬ್ಬರು ಆರೋಪಿಗಳಿಗೆ ಶೋಧ ಕಾರ್ಯ ನಡೆಸಿದ್ದಾರೆ. ಬಂಧಿತ ಆರೋಪಿಯನ್ನು ದೀಪಕ್ ರಾಜೇಶ್ ಕುವೆಲ್ಲೋ ಎಂದು ಗುರುತಿಸಲಾಗಿದೆ.