ಇಡೀ ರಾಜ್ಯದಲ್ಲಿ 5000ದಷ್ಟು ಪ್ರಕರಣ ದಾಖಲಾಗಿತ್ತು. ಇದರಲ್ಲಿ ಶೇಕಡಾ 20ರಷ್ಟು ಅಂದರೆ 1006 ಸೋಂಕು ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದೆ.
ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ಸೋಂಕು ದಾಖಲಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ.
ಮುಂದಿನ ಸೋಮವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನ್ ಲಾಕ್ ಆಗಬಹುದು. ಕಠಿಣ ನಿಯಮದಿಂದ ಸಡಿಲಿಕೆ ಆಗಬಹುದು ಎಂದು ಅಂದುಕೊಂಡಿದ್ದ ಜನತೆಗೆ ಇದು ನಿದ್ರೆ ಇಲ್ಲದಂತೆ ಮಾಡಿದೆ.
ಆದರೆ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಸ್ಪಷ್ಟೀಕರಣ ನೀಡಿದ್ದು, ಅವರ ಹೇಳಿಕೆಯಿಂದ ಜಿಲ್ಲೆಯ ಜನರು ಕೊಂಚ ಮಟ್ಟಿಗೆ ನಿರಾಳತೆ ಅನುಭವಿಸುವಂತೆ ಮಾಡಿದೆ.
ಹೌದು, ಶುಕ್ರವಾರದ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಆದರೆ, ಅದರ ಬಗ್ಗೆ ತಲೆಕಡಿಸಿಕೊಳ್ಳಬೇಡಿ. ನಮ್ಮ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿ ಇದೆ. ಹಾಗಂತ, ನಿರ್ಲಕ್ಷ್ಯ ಬೇಡ. ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ ಮತ್ತು ಲಾಕ್‌ಡೌನ್ ನಿಯಮ ಪಾಲಿಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲವೇ..?
ಸೋಂಕು ಪ್ರಕರಣ ಸಂಖ್ಯೆ ದಿಢೀರ್ ಏರಿಕೆಗೆ ಕಾರಣಗಳೇನು..?
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಹೇಳುವ ಹಾಗೆ, ಪ್ರತಿ ದಿನ ಸುಮಾರು 2ರಿಂದ 3 ಸಾವಿರದಷ್ಟು ಪರೀಕ್ಷೆ ಮಾಡಲಾಗುತ್ತದೆ. ಶುಕ್ರವಾರ ನಾಲ್ಕುಪಟ್ಟು ಅಂದರೆ 11000 ಕೋವಿಡ್ ಟೆಸ್ಟ್ ಮಾಡಲಾಗಿದೆ. ಇದರಿಂದ ಸೋಂಕಿನ ಪ್ರಮಾಣವೂ ಹೆಚ್ಚಾಗಿದೆ.
ಆದರೆ, ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಗಮನಾರ್ಹವಾಗಿ ಇಳಿದಿದೆ. ಕಳೆದ ವಾರ ಶೇಕಡಾ 18ರಷ್ಟು ಇದ್ದ ಪ್ರಮಾಣ ಈಗ 9ಕ್ಕಿಂತ ಕಡಿಮೆಯಾಗಿದೆ.
ಮಧ್ಯಾಹ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ವೀಡಿಯೋ ಸಂವಾದ ನಡೆಯಲಿದ್ದು, ಸಂಜೆ ಉಸ್ತುವಾರಿ ಸಚಿವರು ಮತ್ತು ಸಂಸದರ ಜೊತೆ ಚರ್ಚೆ ಮಾಡಿ ಲಾಕ್ ಡೌನ್ ನಿಯಮಗಳನ್ನು ಸಡಿಲಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜೇಂದ್ರ ಅಭಯ ನೀಡಿದ್ದಾರೆ.
