ಮಂಗಳೂರು: ಆರೋಗ್ಯ ಕೇಂದ್ರಗಳಲ್ಲಿ ಅರಾಜಕತೆ?
ಲಸಿಕೆ ಇಲ್ಲ, ಕ್ಯೂ ನಿಂತ ಜನರಿಂದ ಹಿಡಿಶಾಪ
ಮಂಗಳೂರು: ಮಂಗಳೂರಿನ ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಲಸಿಕೆಗೆ ಜನ ಮಾರುದ್ದ ಕ್ಯೂ ನಿಲ್ಲುವಂತಾಗಿದೆ. ಲಾಕ್‌ಡೌನ್ 10 ಗಂಟೆಯಿಂದ ಆರಂಭವಾಗುತ್ತದೆ. ಆದರೆ, ಇಲ್ಲಿ ಲಸಿಕೆ ಕೊಡಲು ಆರಂಭವಾಗುವುದೇ ಆ ಹೊತ್ತಿಗೆ.
ಜನರಿಗೆ ಮತ್ತೆ ಲಾಕ್‌ಡೌನ್ ಬಿಸಿ. ಅದರ ಮೇಲೆ ವೈದ್ಯಕೀಯ ಸಿಬ್ಬಂದಿಯ ತಾತ್ಸಾರಭರಿತ ನಡವಳಿಕೆ. ಒಟ್ಟಿನಲ್ಲಿ ಲಸಿಕೆ ಬಯಸುವ ಜನರಿಗೆ ಸರತಿಯ ಸಾಲಿನಲ್ಲಿ ನಿಂತರೂ ಲಸಿಕೆ ಸಿಗೋದಿಲ್ಲ.
ವೆನ್‌ಲಾಕ್‌ನಲ್ಲಿ ಟೋಕನ್ ವಾಪಸ್
ಈ ಮಧ್ಯೆ, ಮಂಗಳೂರಿನ ವಿವಿಧೆಡೆ ಲಸಿಕೆ ಕೊರತೆ ಮುಂದುವರಿದಿದೆ. ಕೊರೋನಾ ಲಸಿಕೆ ಕೊರತೆಯಿಂದ ಲಸಿಕೆ ಬಯಸಿ ಆರೋಗ್ಯ ಕೇಂದ್ರಕ್ಕೆ ಹೋದವರಿಗೆ ನಿರಾಸೆ ಕಾದಿತ್ತು. ತಮ್ಮ ಮೊದಲ ಡೋಸ್‌ಗಾಗಿ ವೆನ್‌ಲಾಕ್ ಆಸ್ಪತ್ರೆಗೆ ಹೋದ ಜನರನ್ನು ತಮ್ಮ ಟೋಕನ್‌ಗಳನ್ನು ಹಿಂತಿರುಗಿಸಲು ಕೇಳಲಾಯಿತು ಮತ್ತು ಲಸಿಕೆ ತೆಗೆದುಕೊಳ್ಳಲು ಅನುಮತಿ ನೀಡಲಿಲ್ಲ.
ಅಸಮಾಧಾನಗೊಂಡ ಕೆಲ ಸಂತ್ರಸ್ತರು ಜಿಲ್ಲಾ ಕಾಂಗ್ರೆಸ್ ಸಹಾಯವಾಣಿಗೆ ಕರೆ ಮಾಡಿದರು. ಲಸಿಕೆ ಕೊರತೆ ಬಗ್ಗೆ ತಮ್ಮ ಆಕ್ರೋಶವನ್ನು ಬಿಚ್ಚಿಟ್ಟರು.
ಪರಿಸ್ಥಿತಿಯನ್ನು ಅರಿತುಕೊಂಡ ಕಾಂಗ್ರೆಸ್ ನಾಯಕರು, ಮಾಜಿ ಎಂಎಲ್‌ಸಿ ಐವನ್ ಡಿಸೋಜಾ, ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರ ಜೊತೆ ಸಮಾಲೋಚನೆ ನಡೆಸಿ ಲಸಿಕೆ ನೀಡಲು ಅನುಮತಿ ಕೋರಿದರು. ತಕ್ಷಣ ಮಧ್ಯಪ್ರವೇಶ ಮಾಡಿದ ಜಿಲ್ಲಾಧಿಕಾರಿ ಲಸಿಕೆಗಾಗಿ ಟೋಕನ್ ಪಡೆದ ಜನರಿಗೆ ತಮ್ಮ ಮೊದಲ ಡೋಸ್ ಪಡೆಯಲು ಅವಕಾಶ ಮಾಡಿಕೊಟ್ಟರು.

