ನವದೆಹಲಿ: ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ಮಾಡಲು ಭಾರೀ ಮೊತ್ತದ ಹಣಕ್ಕಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಇನ್ನಿಬ್ಬರು ಒತ್ತಾಯಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಶೂಟರ್ ವರ್ತಿಕಾ ಸಿಂಗ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮುಂದೆ ದೂರು ನೀಡಿದ್ದಾರೆ.
ಈ ದೂರು ಅರ್ಜಿಯನ್ನು ದಾಖಲಿಸಿಕೊಂಡಿರುವ ಸಂಸದ-ಶಾಸಕರ ಕೋರ್ಟ್, ಈ ದೂರು ಅರ್ಜಿ ತನ್ನ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಿದೆ. ಈ ಬಗ್ಗೆ ಜನವರಿ 2ಕ್ಕೆ ವಿಚಾರಣೆ ನಡೆಯಲಿದೆ.
ಸಚಿವೆ ಸ್ಮೃತಿ ಇರಾನಿ ಅವರ ಆಪ್ತರು ಎಂದು ಹೇಳಿಕೊಂಡಿರುವವರು ವರ್ತಿಕಾ ಸಿಂಗ್ ಅವರಿಗೆ ಪತ್ರವೊಂದನ್ನು ನೀಡಿದ್ದು, ತಮ್ಮನ್ನು ಅದರಲ್ಲಿ ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ ಎಂದು ಶೂಟರ್ ಆರೋಪಿಸಿದ್ದಾರೆ.
ಕೇಂದ್ರ ಸಚಿವರ ಇಬ್ಬರು ಸಹಾಯಕರಾದ ವಿಜಯ್ ಗುಪ್ತಾ ಮತ್ತು ರಜನೀಶ್ ಸಿಂಗ್ ಅವರು ಮೊದಲಿಗೆ 1 ಕೋಟಿ ರೂ. ಬೇಡಿಕೆ ಇಟ್ಟರು ಮತ್ತು ನಂತರ ಅದನ್ನು 25 ಲಕ್ಷ ರೂ.ಗೆ ಇಳಿಸಿದರು ಎಂದು ವರ್ತಿಕಾ ಸಿಂಗ್ ತಮ್ಮ ದೂರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
